ಬೆಂಗಳೂರು, ಜುಲೈ 29
ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, 1 ರಿಂದ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 80 ಕೋಟಿ ರೂ.ವೆಚ್ಚದಲ್ಲಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ವಸತಿ, ವಕ್ಪ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಬಿ.ಝಡ್.ಜಮೀರ್ ತಿಳಿಸಿದರು.
ಇಂದು ವಸಂತನಗರದ ಡಿ.ದೇವರಾಜ ಅರಸು ಭವನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಂಶುಪಾಲರಿಗೆ ಹಮ್ಮಿಕೊಳ್ಳಲಾಗಿದ್ದ ಶೈಕ್ಷಣಿಕ ಕಾರ್ಯಾಗಾರದ ಉದ್ಘಾಟನೆಯನ್ನು ಗಿಡಗಳಿಗೆ ನೀರುಣಿಸುವ ಮೂಲಕ ನೆರವೇರಿಸಿ ಮಾತನಾಡಿದ ಸಚಿವರು, ವಿದ್ಯಾಭ್ಯಾಸವಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಮನಗಂಡಿರುವ ಸರ್ಕಾರ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ 3200 ಕೋಟಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 1,488 ಕೋಟಿ ರೂಗಳನ್ನು ಶಿಕ್ಷಣಕ್ಕಾಗಿ ಮೀಸಲಿಡಲಾಗಿದೆ ಎಂದರು.
2023-24ನೇ ಸಾಲಿನಲ್ಲಿ ಅಲ್ಪಸಂಖ್ಯಾತರ 62 ವಸತಿ ಶಾಲೆಗಳನ್ನು ಪಿಯು ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗಿದೆ ಹಾಗೂ ಅಲ್ಪಸಂಖ್ಯಾತರ 50 ಮೊರಾರ್ಜಿದೇಸಾಯಿ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯಾಬಲವನ್ನು ದ್ವಿಗುಣಗೊಳಿಸಲಾಗಿದ್ದು, ಇದರಿಂದಾಗಿ 3,387 ವಿದ್ಯಾರ್ಥಿಗಳು ಪ್ರವೇಶಾತಿಯನ್ನು ಪಡೆದಿದ್ದಾರೆ. 4,03,877 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಒಟ್ಟು ರೂ.58.95 ಕೋಟಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಹಾಗೂ 77,330 ವಿದ್ಯಾರ್ಥಿಗಳಿಗೆ ರೂ.70.20 ಕೋಟಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನವನ್ನು ಪಾವತಿಸಲಾಗಿದೆ 500 ಕೋಟಿ ರೂ.ಗಳ ವೆಚ್ಚದಲ್ಲಿ 35 ಕನ್ನಡ ಹಾಗೂ ಇಂಗ್ಲೀಷ್ ಭಾಷಾ ಪ್ರಯೋಗಾಲಯಗಳನ್ನು ತೆರೆಯಲಾಗಿದೆ ಎಂದರು.
ಅಲ್ಪಸoಖ್ಯಾತರ ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 6 ಸಾವಿರ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದಿಂದಲೇ ನೀಟ್, ಜೆ.ಇ.ಇ, ಸಿ.ಇ.ಟಿ, ಸಿ.ಎ. ಫೌಂಡೇಷನ್/ಸಿಎಲ್‌ಎಟಿ ಹಾಗೂ ಇತರೆ ಪ್ರವೇಶ ಪರೀಕ್ಷೆಗಳ ತಯಾರಿಗಾಇ ಪ್ರತಿಷ್ಠಿತ ಸಂಸ್ಥೆಗಳಿಂದ ಎರಡು ವರ್ಷಗಳ ತರಬೇತಿಯನ್ನು ಪ್ರಾರಂಭಿಸಲಾಗಿದೆ. ಪ್ರತಿಷ್ಠಿತ ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ನಿಗಮದಿಂದ ರೂ.20 ಲಕ್ಷದವರೆಗೆ ಸಾಲ ಒದಗಿಸುವ ಯೋಜನೆಯನ್ನು ಹೊಸದಾಗಿ ಅನುಷ್ಠಾನಗೊಳಿಸಲಾಗಿದ್ದು, ಒಟ್ಟು 66 ವಿದ್ಯಾರ್ಥಿಗಳಿಗೆ 650 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ.
ವಿದೇಶಿ ವಿದ್ಯಾರ್ಥಿ ವೇತನ ಯೋಜನೆಯಡಿಯಲ್ಲಿ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ 304 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಒಟ್ಟು ರೂ.28.11 ಕೋಟಿಗಳ ವಿದ್ಯಾರ್ಥಿ ವೇತನ ಪಾವತಿಸಲಾಗಿದೆ. ಎಂ.ಫಿಲ್ ಮತ್ತು ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆಯಡಿ 241 ವಿದ್ಯಾರ್ಥಿಗಳಿಗೆ ರೂ.425 ಕೋಟಿಗಳನ್ನು ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸಕ್ಕಾರ ಯೋಜನೆಯಡಿ 8,854 ವಿದ್ಯಾರ್ಥಿಗಳಿಗೆ ರೂ.4.25 ಕೋಟಿಗಳನ್ನು ವೆಚ್ಚ ಮಾಡಲಾಗಿದೆ ಎಂದರು.
ವಿದ್ಯಾಸಿರಿ ಯೋಜನೆಯಡಿ 2023-24ನೇ ಸಾಲಿಗೆ ರೂ.10.31 ಕೋಟಿಗಳನ್ನು ವೆಚ್ಚ ಮಾಡಲಾಗಿದ್ದು 6,963 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಉತ್ತೇಜನ ಯೋಜನೆಯಡಿ ರೂ.6.04 ಕೋಟಿಗಳನ್ನು ವೆಚ್ಚ ಮಾಡಲಾಗಿದ್ದು, 2,418 ಬಿ.ಎಡ್ ಮತ್ತು ಡಿ.ಎಡ್ ಹಾಗೂ ಐಐಟಿ, ಐಐಎಂ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ.
ಈಗಾಗಲೇ ಇಲಾಖಾ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ವಸತಿ ಕಾಲೇಜುಗಳಲ್ಲಿ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳ ತಲಾ 110 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದ್ದು, ವಸತಿ ಶಾಲೆಗಳಲ್ಲಿ ಮಂಚಗಳು, ಹಾಸಿಗೆಗಳು, ಡೆಸ್ಕ್ಗಳು, ಮೂಲಭೂತ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷಗಳಿಗೆ ತರಬೇತಿ ಯೋಜನೆಯಡಿ 400 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಜ್ ಭವನದಲ್ಲಿ ಐಎಎಸ್ ಮತ್ತು ಕೆಎಎಸ್ ಪರೀಕ್ಷಾಪೂರ್ವ ತರಬೇತಿಯನ್ನು ನೀಡಲಾಗುತ್ತಿದೆ. ಇಲ್ಲಿ ತರಬೇತಿ ಪಡೆದ 9 ಅಭ್ಯರ್ಥಿಗಳು ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. 120 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪದವಿ ಜೊತೆಗೆ ಐ.ಎ.ಎಸ್ ಮತ್ತು ಕೆ.ಎ.ಎಸ್ ತರಬೇತಿಯನ್ನು ಖಾಸಗಿ ಸಂಸ್ಥೆಯಿAದ ವಸತಿ ಸಹಿತವಾಗಿ ನೀಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ವಸತಿ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು 2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಶೇ.91 ರಿಂದ ಶೇ. 98ರ ವರೆಗೆ ಅತ್ಯುತ್ತಮ ಅಂಕ ಪಡೆದಿರುವ 54 ವಿದ್ಯಾರ್ಥಿಗಳನ್ನು ಹಾಗೂ ಶೇ.100 ರಷ್ಟು ಫಲಿತಾಂಶವನ್ನು ಪಡೆದ ಹಾಗೂ ಉತ್ತಮ ಕಾರ್ಯನಿರ್ವಹಣೆ ಹೊಂದಿರುವ ಶಾಲೆ-ಕಾಲೇಜುಗಳ 04 ಪ್ರಾಂಶುಪಾಲರಿಗೆ, 34 ಶಿಕ್ಷಕರಿಗೆ ಹಾಗೂ 4 ನಿಲಯ ಪಾಲಕರಿಗೆ ಸಚಿವರು ಸನ್ಮಾನ ಮಾಡಿದರು.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ 10 ಸಾವಿರ ರೂ.ಗಳ ನಗದು ಬಹುಮಾನ, ಅಭಿನಂದನಾ ಪ್ರಶಸ್ತಿ ಫಲಕ, ಪದಕ, ಹಾಗೂ ಪಿಯು ವಿದ್ಯಾರ್ಥಿಗಳಿಗೆ 15 ಸಾವಿರ ರೂ.ಗಳ ನಗದು ಬಹುಮಾನ, ಅಭಿನಂದನಾ ಪ್ರಶಸ್ತಿ ಫಲಕ, ಪದಕ ಹಾಗೂ ಸಚಿವರು ವೈಯಕ್ತಿಕವಾಗಿ ಈ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ವಾಚ್ ನೀಡಿ ಸನ್ಮಾನ ಮಾಡಿದರು.
ಶಿಕ್ಷಕರುಗಳಿಗೆ ಆಭಿನಂದನಾ ಪ್ರಶಸ್ತಿ ಪತ್ರ ಮತ್ತು ವೈಯಕ್ಷಿವಾಗಿ ಸ್ಮಾರ್ಟ್ ವಾಚ್ ನೀಡಿ ಸನ್ಮಾನ ಮಾಡಿ ಅಭಿನಂದಿಸಿದ ಸಚಿವರು, ಪ್ರಸಕ್ತ ಸಾಲಿನಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರತಿ ವರ್ಷವೂ ನಡೆಸಲಾಗುವುದು. ಈ ರೀತಿಯ ಕಾರ್ಯಕ್ರಮದಿಂದ ಬೇರೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷರಿಗೆ ಸ್ಪೂರ್ತಿದಾಯಕವಾಗುತ್ತದೆ ಎಂದರು.
ಪ್ರತಿಯೊಬ್ಬ ಮಕ್ಕಳಿಗೂ ಶಿಕ್ಷಣ ಸಿಗಬೇಕು ಹಾಗೂ ಯಾರೂ ಶಿಕ್ಷಣದಿಂದ ವಂಚಿತರಾಬಾರದು ಎಂದು ಬಡ ಮಕ್ಕಳಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಬಡವರ ಮಕ್ಕಳೆ ಚೆನ್ನಾಗಿ ಓದುತ್ತಿದ್ದು, ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅವರನ್ನು ಉನ್ನತ ಮಟ್ಟಕ್ಕೆ ಬೆಳೆಸಬೇಕು. ಮಕ್ಕಳು ಸಹ ಪೋಷಕರ ಕಷ್ಟವನ್ನು ಅರಿತು ಅವರಿಗೆ ಹೊರೆಯಾಗದಂತೆ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆರಬೇಕು ಎಂದರು.
ಇoದು ಸನ್ಮಾನ ಮಾಡಿದ 54 ವಿದ್ಯಾರ್ಥಿಗಳ ಪೈಕಿ ಅತಿ ಹೆಚ್ಚು ಅಂಕ ಪಡೆದ 32 ವಿದ್ಯಾರ್ಥಿಗಳಿಗೆ ಸಚಿವರು ವೈಯಕ್ತಿಕವಾಗಿ ಆಗಸ್ಟ್ ಮಾಹೆಯ ಅಂತ್ಯದೊಳಗೆ ದ್ವಿಚಕ್ರ ವಾಹನ ವಿತರಿಸಲಾಗುವುದು ಎಂದರು.
ಇದೇ ಶೈಕ್ಷಣಿಕ ವರ್ಷದಿಂದ ಪಿಯುಸಿಯಲ್ಲಿ ಶೇ.98 ರಷ್ಟು ಅಂಕ ಪಡೆದ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ನಾನೇ ವೈಯಕಿಕವಾಗಿ ದತ್ತು ಪಡೆದು ಅವರು ಯಾವ ಕಾಲೇಜಿನಲ್ಲಿ ಯಾವ ಶಿಕ್ಷಣ ಪಡೆದರು ಸಹ ನಾನು ಅವರಿಗೆ ಶಿಕ್ಷಣ ಕೋಡಿಸುತ್ತೇನೆ. ಹಾಸ್ಟೆಲ್ ವಿದ್ಯಾರ್ಥಿಗಳನ್ನು ಶಿಕ್ಷಕರು ತಮ್ಮ ಮಕ್ಕಳಂತೆ ಭಾವಿಸಿ ಅವರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದರು.
ಇದೇ ಸಂದರ್ಭದಲ್ಲಿ 2023-24ನೇ ಸಾಲಿನ ಇಲಾಖಾ ಸಾಧನಾ ಪುಸ್ತಕ ಹಾಗೂ 2024-25ನೇ ಸಾಲಿನ ಶೈಕ್ಷಣಿಕ ಕ್ರಿಯಾ ಯೋಜನೆ ಮತ್ತು 2024-25ನೇ ಸಾಲಿನ ಕ್ರಿಯಾ ಯೋಜನೆ ಪುಸ್ತಕ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧ್ಯಕ್ಷರಾದ ನಿಸ್ಸಾರ್ ಅಹಮದ್, ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶಕರು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.