ಡೆಂಘೀ ಪ್ರಕರಣ ನಿಯಂತ್ರಿಸಲು ಮನೆ-ಮನೆ ಸಮೀಕ್ಷೆ: ತುಷಾರ್ ಗಿರಿ ನಾಥ್

0
41
Share this Article
0
(0)
Views: 1

ನಗರದಲ್ಲಿ ಡೆಂಘೀ ಹರಡುವಿಕೆಯನ್ನು ತಡೆಯುವ ಸಲುವಾಗಿ ಮನೆ-ಮನೆ ಸಮೀಕ್ಷೆ ನಡೆಸಿ ನಾಗರೀಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು *ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್* ರವರು ತಿಳಿಸಿದರು. 

ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣ ನಿಯಂತ್ರಿಸುವ ಸಂಬಂಧ ಇಂದು ಪಾಲಿಕೆ ಕೇಂದ್ರ ಕಛೇರಿ ಸಭಾಂಗಣ-01ರಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯಾ ವಲಯ ವ್ಯಾಪ್ತಿಯಲ್ಲಿ ಆರೋಗ್ಯ ಪರಿವೀಕ್ಷರು, ಆಶಾ ಕಾರ್ಯಕರ್ತೆಯರು, ಎ.ಎನ್.ಎಂ ಗಳು ಹಾಗೂ ಲಿಂಕ್ ವರ್ಕರ್ಸ್ಗಳು ಸೇರಿದಂತೆ 1000 ಮನೆಗಳಿಗೊಂದು ಬ್ಲಾಕ್ ಅನ್ನು ರಚಿಸಿಕೊಳ್ಳಬೇಕು. ನಂತರ ಲಾರ್ವಾ ಇರುವ ತಾಣಗಳನ್ನು ಗುರುತಿಸುವುದು, ನಾಗರೀಕರಲ್ಲಿ ಅರಿವು ಮೂಡಿಸುವುದು ಹಾಗೂ ಯಾರಿಗಾದರು ಜ್ವರ ಬಂದಿದ್ದಲ್ಲಿ ಅಂತಹವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಮಾಡಿಸಕೊಳ್ಳಲು ತಿಳಿಸುವುದು ಸೇರಿದಂತೆ ಸಮಗ್ರವಾಗಿ ಮನೆ-ಮನೆ ಸಮೀಕ್ಷೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಈಡೀಸ್, ಈಜಿಪ್ಟೈ ಎಂಬ ಸೊಳ್ಳೆಗಳಿಂದ ಡೆಂಘೀ ರೋಗ ಹರಡುತ್ತದೆ. ಈ ನಿಟ್ಟಿನಲ್ಲಿ ಸೊಳ್ಳೆ ನಿಯಂತ್ರಣ ಮಾಡಲು ಲಾರ್ವಾ ಉತ್ಪಿತ್ತಿಯಾಗುವ ತಾಣಗಳನ್ನು ಗುರಿತಿಸಿ ನಾಶಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಮನೆಯಲ್ಲಿರುವ ಸಲಕರಣೆಳಲ್ಲಿ ಹೆಚ್ಚು ದಿನಗಳ ಕಾಲ ನೀರಿದ್ದರೆ ಲಾರ್ವಾ ಉತ್ಪತ್ತಿಯಾಗಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗುತ್ತದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಪಾಲಿಕೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಗರದಲ್ಲಿ 2024 ಜನವರಿಯಿಂದ ಜೂನ್ ವರೆಗೆ 1230 ಪ್ರಕರಣಗಳು ಕಂಡುಬಂದಿದ್ದು, ವಲಯವಾರು ಮೈಕ್ರೋ ಪ್ಲಾನ್ ಮಾಡಿಕೊಂಡು ಡೆಂಘೀ ಹರಡುವಿಕೆಯನ್ನು ನಿಯಂತ್ರಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನಗರದಲ್ಲಿ ಮಳೆ ಬಿಟ್ಟು ಬಿಟ್ಟು ಬರುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜಾಗೃತಿ(IEC) ಚಟುವಟಿಕೆಗಳ್ನನು ಹೆಚ್ಚಾಗಿ ನಡೆಸಲಾಗುತ್ತಿದೆ. ಇದನ್ನು ಸರ್ಕಾರದ ಮಟ್ಟದಲ್ಲೂ ಮಾಡಲಾಗುತ್ತಿದ್ದು, ಪಾಲಿಕೆಯಿಂದಲೂ ಆಯಾ ವಲಯಗಳಲ್ಲಿ ಹಲವಾರು ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. 

ಎನ್.ಎಸ್ 1 ಟೆಸ್ಟ್ ಕಿಟ್ ಮೂಲಕ ಡೆಂಘೀ ಪರೀಕ್ಷೆ:

ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜ್ವರ ಪ್ರಕರಣಗಳು ಕಂಡುಬಂದರೆ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎನ್.ಎಸ್ 1 ಟೆಸ್ಟ್ ಕಿಟ್ ಮೂಲಕ ಪರೀಕ್ಷೆ ಮಾಡಿ ಖಚಿತವಾದ ಬಳಿಕ ರಕ್ತದ ಮಾದರಿ ಸಂಗ್ರಹಿಸಿಕೊಂಡು ಪ್ರಯೋಗಾಲಯಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು. 

15 ದಿನಕ್ಕೊಮ್ಮೆ ಮನೆ-ಮನೆ ಭೇಟಿ:

ಪಾಲಿಕೆ ವ್ಯಾಪ್ತಿಯಲ್ಲಿ ಬರುವ 28 ಲಕ್ಷ ಮನೆಗಳ ಪೈಕಿ, 14 ಲಕ್ಷ ಮನೆಗಳು ಬಡ ವರ್ಗವಿರುವ ಪ್ರದೇಶ, ಜನ ಸಂಖ್ಯೆ ಹೆಚ್ಚಿರುವ ಪ್ರದೇಶ ಹಾಗೂ ತಗ್ಗು ಪ್ರದೇಶಗಳಲ್ಲಿರುವ 14 ಲಕ್ಷ ಮನೆಗಳಿಗೆ 15 ದಿನಕ್ಕೊಮ್ಮೆ ಭೇಟಿ ನೀಡಿ ಲಾರ್ವಾ ಉತ್ಪತ್ತಿ ತಾಣಗಳು ಹಾಗೂ ನಾಗರೀಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಲಾಗುವುದು. ಮನೆ-ಮನೆ ಸಮೀಕ್ಷ್ಷೆ ಮಾಡುವ ಸಲುವಾಗಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕರನ್ನು ನಿಯೋಜಿಸಿಕೊಳ್ಳಲು ಕ್ರಮವಹಿಸಲಾಗುತ್ತಿದೆ ಎಂದರು. 

ಇಲಾಖೆಗಳ ಜೊತೆ ಸಮನ್ವಯ:

ಡೆಂಘೀ ಪ್ರಕರಣಗಳನ್ನು ನಿಯಂತ್ರಿಸಲು ಮನೆ-ಮನೆಗಳಿಗೆ ಭೇಟಿ ನೀಡುವ ಜೊತೆಗೆ ತೋಟಗಾರಿಕಾ ಇಲಾಖೆ, ಅರಣ್ಯ ಇಲಾಖೆ, ಘನತ್ಯಾಜ್ಯ, ಬೃಹತ್ ನೀರುಗಾಲುವೆ, ರಸ್ತೆ ಮೂಲಭೂತ ಸೌಕರ್ಯ ವಿಭಾಗ ಸೇರಿದಂತೆ ಇನ್ನಿತರ ಇಲಾಖೆಗಳ ಜೊತೆ ವಲಯವಾರು ಸಮನ್ವಯ ಸಾಧಿಸಿ ನೀರು ನಿಲ್ಲುವ ಪ್ರದೇಶಗಳನ್ನು ಗುರುತಿಸಿ ನೀರು ನಿಲ್ಲದಂತೆ ಕ್ರಮವಹಿಸಲಾಗುವುದು ಎಂದು ಹೇಳಿದರು. 

ಹೆಚ್ಚು ಪ್ರಕರಣಗಳಿರುವ ಪ್ರದೇಶಗಳಲ್ಲಿ ಸೂಕ್ತ ಕ್ರಮ:

ಮಹದೇವಪುರ, ದಕ್ಷಿಣ ವಲಯ ಹಾಗೂ ಪೂರ್ವ ವಲಯಗಳಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಎಲ್ಲೆಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿದೆಯೋ ಅಲ್ಲೆಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಈ ವೇಳೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸೂರಳ್ಕರ್ ವಿಕಾಸ್ ಕಿಶೋರ್, ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ವಲಯ ಆಯುಕ್ತರಾದ ಆರ್.ಎಲ್ ದೀಪಕ್, ರಮೇಶ್, ವಿನೋತ್ ಪ್ರಿಯಾ, ರಮ್ಯಾ, ಕರೀಗೌಡ, ರಮ್ಯಾ, ಎಲ್ಲಾ ವಲಯ ಜಂಟಿ ಆಯುಕ್ತರು, ಮುಖ್ಯ ಆರೋಗ್ಯಾಧಿಕಾರಿ, ಎಲ್ಲಾ ವಲಯ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಡೆಂಘೀ ಪ್ರಕರಣಗಳ ವಿವರ(2024 ಜನವರಿ ರಿಂದ ಇದುವರೆಗೆ):

ವಲಯ – ಪ್ರಕರಣ

ಬೊಮ್ಮನಹಳ್ಳಿ: 122

ಪೂರ್ವ: 218

ಮಹದೇವಪುರ: 386

ಆರ್.ಆರ್ ನಗರ: 75

ದಕ್ಷಿಣ: 190

ಪಶ್ಚಿಮ: 141

ಯಲಹಂಕ: 90

ದಾಸರಹಳ್ಳಿ: 08

ಒಟ್ಟು: 1230 ಪ್ರಕರಣ

ವರ್ಷವಾರು ಡೆಂಘೀ ಪ್ರಕರಣಗಳ ವಿವರ:

ವರ್ಷ – ಪ್ರಕರಣಗಳು

2019 – 9434

2020 – 1127

2021 – 1629

2022 – 2335

2023 – 11136 (2023 ಜನವರಿಯಿಂದ ಜೂನ್ ವರೆಗೆ – 732 ಪ್ರಕರಣ)

2024 – 1230 (2024 ಜನವರಿಯಿಂದ ಜೂನ್ ವರೆಗೆ)

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here