Views: 0
ಶಿವಮೊಗ್ಗ ಮೇ-31
ತಂಬಾಕು ಮನುಕುಲದ ವಿನಾಶಕಾರಿಯಾಗಿದ್ದು ಪ್ರತಿಯೊಬ್ಬರು ಸೈನಿಕರಂತೆ ಹೋರಾಡಬೇಕಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಮಂಜುನಾಥ ನಾಯಕ್ ಅವರು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಸುಬ್ಬಯ್ಯ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜು, ಶರಾವತಿ ದಂತ ವೈದ್ಯಕೀಯ ಕಾಲೇಜು, ಜಿಲ್ಲಾ ಮೆಗ್ಗಾನ್ ಬೊಧನಾ ಆಸ್ಪತ್ರೆ, ಕಿ.ಮ.ಅ.ಸ ತರಬೇತಿ ಶಾಲೆ, ಜಿಲ್ಲಾ ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ವೈದ್ಯಕೀಯ ಸಂಘ ಇವರ ವತಿಯಿಂದ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಜಾಗೃತಿ ಜಾಥ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಂಬಾಕು ಸೇವನೆಯಿಂದ ದೇಶದಲ್ಲಿ ಪ್ರತಿವರ್ಷ ಲಕ್ಷಾಂತರ ಜನರು ಸಾವನ್ನಾಪ್ಪುತ್ತಿದ್ದಾರೆ. ಇಂದಿನ ದಿನಗಳಲ್ಲಿ ಅತೀ ಹೆಚ್ಚು ಯುವ ಜನರು ತಂಬಾಕು ವ್ಯಸನಿಗಳಾಗಿದ್ದು, ಕ್ಯಾನ್ಸರ್ ಹಾಗೂ ಅನೇಕ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಈ ವೇಳೆ ತಂಬಾಕು ರಹಿತ ದಿನಾಚರಣೆಯ ಕುರಿತು ಪ್ರತಿಜ್ಞಾ ವಿಧಿಯನ್ನು ಬೊಧಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಮ್. ಎಸ್. ಸಂತೋಷ್ ಅವರು ಮಾತನಾಡಿ ತಂಬಾಕು ನಮ್ಮ ಸಮಾಜದಲ್ಲಿ ಮಾರಕವಾಗಿದ್ದು, ಪ್ರತಿನಿತ್ಯ ನಾವು ನಡೆದಾಡುವ ರಸ್ತೆಯಲ್ಲಿ ಗಮನಿಸಿದರೆ ಗುಟ್ಕ, ಸಿಗರೇಟ್ ತ್ಯಾಜ್ಯಗಳನ್ನು ನಾವು ಕಾಣುತ್ತೇವೆ. ಅತೀ ಹೆಚ್ಚು ಯುವ ಜನತೆ ತಂಬಾಕು ವ್ಯಸನಿಗಳಿಗೆ ತಮ್ಮ ಜೀವನವನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ತಮ್ಮ ಸ್ನೇಹಿತರಿಗೆ, ಹಿತೈಷಿಗಳಿಗೆ ಹಾಗೂ ಸಮಾಜದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾ ನ್ಯಾಯಾಲಯದ ಆವರಣದಿಂದ ಮಹಾವೀರ ವೃತ್ತ, ಗೋಪಿ ವೃತ್ತ, ಮಾರ್ಗವಾಗಿ ಐಎಂಎ ಹಾಲ್ವರೆಗೆ ತಂಬಾಕು ರಹಿತ ಸಮಾಜದ ಕುರಿತು ಘೋಷಣೆಗಳ ಮೂಲಕ ಜಾಗೃತಿ ಜಾಥವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಾ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಟರಾಜ್, ಹಾಗೂ ಆರೋಗ್ಯ ಇಲಾಖೆಯ ಡಾ.ಸಿದ್ದನಗೌಡ ಪಾಟೀಲ್, ಡಾ.ಮಲ್ಲಪ್ಪ, ಡಾ.ತಿಮ್ಮಪ್ಪ, ಡಾ. ಕಿರಣ್ ಕುಮಾರ್, ಡಾ.ವಿರುಪಾಕ್ಷಪ್ಪ, ಡಾ.ಚಂದ್ರಶೇಖರ್, ರೋಟರಿ ಕ್ಲಬ್ ಅಧ್ಯಕ್ಷರಾದ ವಿಜಯಕುಮಾರ್ ಮತ್ತು ವಿವಿಧ ವೈದ್ಯಕೀಯ ಕಾಲೇಜಿನ ಬೋಧಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.