67,478 ಮೆ.ಟನ್ ರಸಗೊಬ್ಬರ, 16,223 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು
ಬಳ್ಳಾರಿ,ಜೂ.06(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಮಳೆಯು ರೈತರ ಮೊಗದಲ್ಲಿ ನೆಮ್ಮದಿ ಮತ್ತು ಸಂತಸ ಮೂಡಿಸಿದೆ. ಪ್ರಸ್ತುತ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಅತ್ಯಂತ ಬಿರುಸಿನಿಂದ ನಡೆಯುತ್ತಿದ್ದು, ಜಿಲ್ಲೆಯಲ್ಲಿ 67,478 ಮೆಟ್ರಿಕ್ ಟನ್ ರಸಗೊಬ್ಬರ ಹಾಗೂ 16,223 ಕ್ವಿಂಟಲ್ ಬಿತ್ತನೆ ಬೀಜದ ದಾಸ್ತಾನು ಮಾಡಲಾಗಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರದ ವಿತರಣೆ ಕಾರ್ಯವು ಸುಗಮವಾಗಿ ನಡೆಯುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್ ಅವರು ತಿಳಿಸಿದ್ದಾರೆ.
ಮಳೆಯ ವಿವರ:
ಜಿಲ್ಲೆಯ ವಾರ್ಷಿಕ ಮಳೆಯು 599.9 ಮಿ.ಮೀ ಇದೆ. 2024 ರ ಜನವರಿಯಿಂದ ಜೂ.01 ರ ವರೆಗೆ 81.5 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, ವಾಸ್ತವವಾಗಿ 119.9 ಮಿ.ಮೀ (ಶೇ.47.1) ಮಳೆ ಸುರಿದಿತ್ತು. ಬಳಿಕ ಮೇ 28 ರಿಂದ ಜೂ.06 ರ ವರೆಗಿನ 07 ದಿನಗಳಲ್ಲಿ 14.3 ಮಿ.ಮೀ ವಾಡಿಕೆ ಮಳೆಗಿಂತ 48.0 ಮಿ.ಮೀ ಮಳೆ (ಶೇ.235.7) ಸುರಿದಿದೆ. ಇದರಿಂದಾಗಿ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಹೆಚ್ಚು ಭರದಿಂದ ನಡೆಯುತ್ತಿವೆ.
ಬಿತ್ತನೆ ಬೀಜ:
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಭತ್ತ, ಜೋಳ, ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ, ತೊಗರಿ, ರಾಗಿ ಸೇರಿ ಒಟ್ಟು 16,223 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, ಕೆ.ಎಸ್.ಎಸ್.ಸಿ., ಎನ್.ಎಸ್.ಸಿ., ಕೆ.ಓ.ಎಫ್ ಸಂಸ್ಥೆಗಳು ಹಾಗೂ ಖಾಸಗಿ ಬಿತ್ತನೆ ಬೀಜ ಸರಬರಾಜುದಾರ ಸಂಸ್ಥೆಗಳಲ್ಲಿ 32,789 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ವಿತರಣೆ ಕಾರ್ಯ ಪ್ರಾರಂಭವಾಗಿದ್ದು, 299 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆಯಾಗಿದೆ.
ಜಿಲ್ಲೆಯಲ್ಲಿ 4,00,043 ಹೆಕ್ಟರ್ ಭೌಗೋಳಿಕ ಪ್ರದೇಶವಿದ್ದು, 2,78,227 ಹೆಕ್ಟರ್ ಸಾಗುವಳಿಗೆ ಸಜ್ಜಾಗಿದೆ. ಒಟ್ಟು 1,59,662 ರೈತರು ಸಾಗುವಳಿದಾರರಿದ್ದು, ಆ ಪೈಕಿ 69,825 ಅತೀ ಸಣ್ಣ ರೈತರು, 44,046 ಸಣ್ಣ ರೈತರು, 44,210 ಮದ್ಯಮ ರೈತರು ಹಾಗೂ 1,581 ದೊಡ್ಡ ರೈತರಿದ್ದಾರೆ.
ಬಿತ್ತನೆ ಕ್ಷೇತ್ರ:
ಜಿಲ್ಲೆಯಲ್ಲಿ ಪ್ರಸ್ತಕ ಸಾಲಿನ ಮುಂಗಾರಿಗೆ 1,73,897 ಹೆಕ್ಟರ್ ಪ್ರದೇಶ ಬಿತ್ತನೆ ಗುರಿ ಇದ್ದು, ಇಲ್ಲಿಯವರೆಗೆ 366 ಹೆಕ್ಟರ್ ಪ್ರದೇಶ ಬಿತ್ತನೆಯಾಗಿದ್ದು, ಶೇ.0.21 ರಷ್ಟು ಪ್ರಗತಿಯಾಗಿದೆ.
ರಸಗೊಬ್ಬರ:
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಯೂರಿಯಾ, ಡಿ.ಎ.ಪಿ ಹಾಗೂ ಕಾಂಪ್ಲೆಕ್ಸ್ ಸೇರಿ ಒಟ್ಟು 1,13,167 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು, ಖಾಸಗಿ ಡೀಲರ್ಸ್, ಕೆ.ಎಸ್.ಎಸ್.ಸಿ ಹಾಗೂ ಮಾರುಕಟ್ಟೆ ಫೆಡರಷನ್ ಮೂಲಕ 70,243 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜಾಗಿದೆ ಮತ್ತು 2,765 ಮೆಟ್ರಿಕ್ ಟನ್ ವಿತರಣೆಯಾಗಿದ್ದು, 67,478 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ.
ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆಯಾಗುವ ಕುರಿತಂತೆ ಹವಾಮಾನ ಇಲಾಖೆಯ ಮುನ್ಸೂಚನೆಗಳು ಇದ್ದು, ಇದಕ್ಕೆ ಪೂರಕವಾಗಿ ಪೂರ್ವ ಮುಂಗಾರು ಉತ್ತಮವಾಗಿದೆ, ಕೃಷಿ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿವೆ. ಜಿಲ್ಲೆಯ ರೈತರಿಗೆ ಭಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಇದ್ದು, ರೈತರು ಯಾವುದೇ ರೀತಿಯ ಆತಂಕ, ಗೊಂದಲಪಡುವ ಅವಶ್ಯಕತೆಯಿಲ್ಲ. ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.