ಬೆಂಗಳೂರು ನಗರ ಜಿಲ್ಲೆ, ಸೆಪ್ಟೆಂಬರ್ 19
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2024-25ನೇ ಸಾಲಿನ ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟವನ್ನು ಸೆಪ್ಟೆಂಬರ್ 24 ಮತ್ತು 25 ರಂದು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಕ್ರೀಡಾ ಕೂಟದಲ್ಲಿ ಗುಂಪು ಆಟಗಳಾದ ವಾಲಿಬಾಲ್, ಬಾಸ್ಕೆಟ್ ಬಾಲ್, ಫಟ್ಬಾಲ್, ಹ್ಯಾಂಡ್ ಬಾಲ್, ಬಾಲ್ ಬ್ಯಾಡ್ಮಿಂಟನ್, ಥ್ರೋಬಾಲ್, ಕಬ್ಬಡಿ , ನೆಟ್ ಬಾಲ್, ಖೋ-ಖೋ ಮತ್ತು ಹಾಕಿ., ವೈಯುಕ್ತಿಕ ಕ್ರೀಡೆಗಳಾದ ಅಥ್ಲೇಟಿಕ್ಸ್, ಟೆನ್ನಿಸ್, ಕುಸ್ತಿ, ಈಜು, ಟೇಬಲ್ ಟೆನ್ನಿಸ್, ಬಾಡ್ಮಿಂಟನ್ ಮತ್ತು ಯೋಗ ಹಾಗೂ ಆಯ್ಕೆ ಮಾಡಲಾಗುವ ಕ್ರೀಡೆಗಳಾದ ಆರ್ಚರಿ (ಬಿಲ್ಲುಗಾರಿಕೆ), ಫೆನ್ಸಿಂಗ್, ಜಿಮ್ನಾಸ್ಟಿಕ್, ಜೂಡೋ, ಭಾರ ಎತ್ತುವಿಕೆ, ವುಷು, ಬಾಕ್ಸಿಂಗ್ ಮತ್ತು ಟೆಕ್ವಾಂಡೋ ಕ್ರೀಡೆಗಳಿದ್ದು, ಭಾಗವಹಿಸಲು ಯಾವುದೇ ವಯೋಮಿತಿಯ ನಿರ್ಬಂಧವಿರುವುದಿಲ್ಲ ಹಾಗೂ ಎಲ್ಲಾ ವಯೋಮಿತಿಯುಳ್ಳ ಪುರುಷ ಮತ್ತು ಮಹಿಳೆಯರು ಭಾಗವಹಿಸಬಹುದಾಗಿರುತ್ತದೆ. ವಿಜೇತರಾದವರಿಗೆ ಪ್ರಮಾಣ ಪತ್ರ, ಮಡೆಲ್ಸ್ ಮತ್ತು ಟ್ರೋಫಿ ನೀಡಲಾಗುವುದು, ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟಕ್ಕೆ ನಿಯೋಜಿಸಲಾಗುವುದು.
ವಿಭಾಗ ಮಟ್ಟದ ದಸರಾ ಕ್ರೀಡಕೂಟದಲ್ಲಿ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ ಕ್ರೀಡಾಪಟುಗಳು ಮಾತ್ರ ಭಾಗವಹಿಸಬಹುದಾಗಿದೆ. ರಕ್ಷಣೆಪಡೆ, ಅರೆ ರಕ್ಷಣಾ ಪಡೆಗೆ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಲ್ಲ.
ಭಾಗವಹಿಸುವ ಅರ್ಹ ಕ್ರೀಡಾಪಟುಗಳು ದಿನಾಂಕ 24-09-2024 ರಂದು ಬೆಳಿಗ್ಗೆ 10.00 ಗಂಟೆಗೆ ನಡೆಯುವ ಕ್ರೀಡಾಕೂಟದ ಉದ್ಘಾಟನಾ ಪಥ ಸಂಚಲನದಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ.
ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ತಮ್ಮೊಂದಿಗೆ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಆಧಾರ ಕಾರ್ಡ್ / ಶಾಲಾ ಕಾಲೇಜು ಮುಖ್ಯಸ್ಥರಿಂದ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ ದೃಢೀಕೃತ ನಕಲು ಪತ್ರವನ್ನು ಕಡ್ಡಾಯವಾಗಿ ತರಬೇಕಾಗಿರುತ್ತದೆ.
ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿಜೇತರಾದ ತಂಡವನ್ನು ಮಾತ್ರ ರಾಜ್ಯ ಮಟ್ಟಕ್ಕೆ ಕಳುಹಿಸಲಾಗುವುದು ಹಾಗೂ ಒಬ್ಬ ಕ್ರೀಡಾಪಟು ಅಥವಾ ತಂಡ ಯಾವುದೇ ಜಿಲ್ಲೆಯಲ್ಲಿ ಒಂದು ಬಾರಿ ತಾಲ್ಲೂಕು ಅಥವಾ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ನಂತರ ಬೇರೆ ಯಾವುದೇ ಜಿಲ್ಲೆಯ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣ, ಬೆಂಗಳೂರು ಅಥವಾ ದೂರವಾಣಿ ಸಂಖ್ಯೆ : 080-22239771 ಮತ್ತು ಮೊಬೈಲ್ ಸಂಖ್ಯೆ : 9480886545, 7204266766 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.