ಬೆಂಗಳೂರು ನಗರ ಜಿಲ್ಲೆ, ಆಗಸ್ಟ್ 06:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ “ಕರ್ನಾಟಕ ಸಂಭ್ರಮ–50” “ಹೆಸರಾಯಿತು ಕರ್ನಾಟಕ-ಉಸಿರಾಯಿತು ಕನ್ನಡ” ಅಭಿಯಾನದ ಅಂಗವಾಗಿ ಮಾನ್ಯ ಮುಖ್ಯಮಂತ್ರಿಗಳು ನವೆಂಬರ್ 2, 2023 ರಂದು ವಿಜಯನಗರ ಜಿಲ್ಲೆಯ ಹಂಪೆಯಿಂದ ರಾಜ್ಯಾದ್ಯಂತ ಸಂಚರಿಸಲಿರುವ ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿದ್ದು, ಈ ರಥಯಾತ್ರೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಲಿದ್ದು ಆಗಸ್ಟ್ 8 ರಂದು ಬೆಂಗಳೂರು ನಗರ ಜಿಲ್ಲೆಗೆ ಆಗಮಿಸಲಿದೆ ಇದಕ್ಕಾಗಿ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಹಾಗೂ ಗೌರವಿತವಾಗಿ ಅದನ್ನು ಸ್ವಾಗತಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಕೆ.ಎ.ದಯಾನಂದ ಅವರು ಅಧಿಕಾರಿಗಳಿಗೆ ಸೂಚಿಸಿದರು. .
ಅವರು ಇಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಕರೆದಿದ್ದ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು.
ಕನ್ನಡ ಜ್ಯೋತಿ ರಥಯಾತ್ರೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಮೂಲಕ ಬೆಂಗಳೂರು ನಗರ ಜಿಲ್ಲೆಗೆ ಆಗಸ್ಟ್ 8 ರಂದು ಆಗಮಿಸಲಿದ್ದು ಅಂದು ಬೆಂಗಳೂರು ಉತ್ತರ ತಾಲ್ಲೂಕು ಕೇಂದ್ರದಲ್ಲಿ ಬೆಳಿಗ್ಗೆ 9.00 ಗಂಟೆಗೆ ಕನ್ನಡ ಜ್ಯೋತಿ ರಥಯಾತ್ರೆಯನ್ನು ಸ್ವಾಗತಿಸಲಾಗುವುದು ಎಂದು ತಿಳಿಸಿದರು.
ಆಗಸ್ಟ್ 09 ರಂದು ಬೆಂಗಳೂರು ಪೂರ್ವ ತಾಲ್ಲೂಕು ಕೇಂದ್ರದಲ್ಲಿ ಬೆಳಿಗ್ಗೆ 9.00 ಗಂಟೆಗೆ, ಆಗಸ್ಟ್ 10 ರಂದು ಬೆಂಗಳೂರು ಪೂರ್ವ ಯಲಹಂಕ ತಾಲ್ಲೂಕು ಕೇಂದ್ರದಲ್ಲಿ ಬೆಳಿಗ್ಗೆ 9.00 ಗಂಟೆಗೆ, ಆಗಸ್ಟ್ 11 ರಂದು ಆನೇಕಲ್ ತಾಲ್ಲೂಕು ಕೇಂದ್ರದಲ್ಲಿ ಬೆಳಿಗ್ಗೆ 9.00 ಗಂಟೆಗೆ ಮತ್ತು ಆಗಸ್ಟ್ 12 ರಂದು ಬೆಂಗಳೂರು ದಕ್ಷಿಣ ತಾಲ್ಲೂಕಿನ ಮೂಲಕ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿಗೆ ಬೀಳ್ಕೊಡಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಸಂಚರಿಸುವ ಸಂದರ್ಭದಲ್ಲಿ ಸೂಕ್ತ ಭದ್ರತೆಯನ್ನು ಕಲ್ಪಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ಅವರು ಕನ್ನಡ ಜ್ಯೋತಿ ರಥಯಾತ್ರೆಯು ತಾಲ್ಲೂಕುಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಆ ತಾಲ್ಲೂಕಿನ ತಹಶೀಲ್ದಾರ್ಗಳ ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕನ್ನಡ ಕುರಿತು ಭಾಷಣ ಏರ್ಪಡಿಸುವಂತೆ ಅವರು ಸೂಚಿಸಿದರು. ಅಲ್ಲದೆ ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರನ್ನು ಪಾಲ್ಗೊಳ್ಳಲು ಆಹ್ವಾನಿಸುವಂತೆ ಅವರು ಸೂಚಿಸಿದರು.
ಕನ್ನಡ ಜ್ಯೋತಿ ರಥಯಾತ್ರೆ ತಾಲ್ಲೂಕಿನಲ್ಲಿ ಅಂತ್ಯಗೊಂಡ ನಂತರ ಅದನ್ನು ಸುರಕ್ಷಿತವಾಗಿ ಸೂಕ್ತ ವ್ಯವಸ್ಥೆಗಳು ಇರುವಂತಹ ಸರ್ಕಾರಿ ಶಾಲೆಗಳಲ್ಲಿ ಇರಿಸಲು ವ್ಯವಸ್ಥೆಯನ್ನು ಮಾಡುವಂತೆ ಹೇಳಿದರು,
ಕನ್ನಡ ಜ್ಯೋತಿ ರಥಯಾತ್ರೆಯು ಆಗಮಿಸುವ ದಿನದಿಂದ ಬೀಳ್ಕೊಡುವ ದಿನಾಂಕದವರೆಗೆ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ಕಲಾಸಕ್ತರು, ಕನ್ನಡಾಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕನ್ನಡ ಜ್ಯೋತಿ ರಥ ಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.