ಮಗು ಜನಿಸಿದ ಒಂದು ಗಂಟೆಯೊಳಗೆ ತಾಯಿ ಎದೆ ಹಾಲು ಕುಡಿಸಿ; ಸರೋಜ
ರಾಯಚೂರು,ಆ.05
ಮಗುವಿಗೆ ತಾಯಿಯ ಹಾಲು ಅಮೃತಕ್ಕೆ ಸಮಾನ. ಮಗು ಜನಿಸಿದ ಒಂದು ಗಂಟೆಯೊಳಗೆ ತಾಯಿ ಎದೆ ಹಾಲು ಮಗುವಿಗೆ ಕುಡಿಸಬೇಕು ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ.ಕೆ ಅವರು ಹೇಳಿದರು.
ಅವರು ಆ.05ರ ಸೋಮವಾರ ದಂದು ತಾಲೂಕಿನ ಯಾಪಲದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಯಚೂರು ತಾಲೂಕು ಆರೋಗ್ಯ ಇಲಾಖೆಯ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ತಾಯಿಯ ಹಾಲು ಮಗುವಿಗೆ ಜೀವ ರಕ್ಷಕ ಇದ್ದಂತೆ. ಇದರಿಂದ ತಾಯಿಯ ಸೌಂದರ್ಯ ಹೆಚ್ಚಿಸುವ ಜತೆಗೆ ತಾಯಿ ಮಗುವಿನ ಬಾಂಧವ್ಯ ಬೆಳೆಯುತ್ತದೆ. ಎದೆ ಹಾಲು ಕುಡಿಸಿದರೆ ಸೌಂದರ್ಯ ಹಾಳಾಗುತ್ತದೆ ಎಂಬ ಕಾರಣಕ್ಕಾಗಿ ಹಾಲು ಕುಡಿಸದೆ ನಿರ್ಲಕ್ಷ್ಯ ಮಾಡಿದರೆ ಸ್ತನ ಕ್ಯಾನ್ಸರ್ ಬಂದು ಜೀವಕ್ಕೆ ಅಪಾಯವಾಗುತ್ತದೆ. ಹೆರಿಗೆಯ ನಂತರ ಮೂರು ದಿನ ಬರುವ ತಾಯಿ ಎದೆಹಾಲು ಹಳದಿ ಹಾಲನ್ನು ಕೊಲೆಸ್ಟ್ರಮ್ ಎಂದು ಕರೆಯುತ್ತಾರೆ. ಅದು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಎಂದರು.
ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವು ಮಗು ಜನಿಸಿದ ಒಂದು ಗಂಟೆಯೊಳಗೆ ತಾಯಿ ಎದೆ ಹಾಲು ಮಗುವಿಗೆ ಕುಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಎದೆ ಹಾಲುಣಿಸುವುದರಿಂದ ಮಗುವಿನ ಆರೋಗ್ಯ ಹಾಗೂ ತಾಯಿ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದರು.
ಈ ವೇಳೆ ವೈದ್ಯಾಧಿಕಾರಿಗಳಾದ ಡಾ.ಶಿವಶರಣಪ್ಪ ಅವರು ಮಾತನಾಡಿ, ತಾಯಿ ಎದೆಹಾಲು ಕೊಡುವದರಿಂದ ಸ್ತನಕ್ಯಾನ್ಸರ್ ಕಾಯಿಲೆ ತಡೆಗಟ್ಟಬಹುದು. ಹಾಗೂ ಮಗುವಿನ ಸಮಗ್ರ ಬೆಳವಣಿಗೆಗೆ ಎದೆಹಾಲಿನ ಜೊತೆಗೆ ಪೂರಕ ಆಹಾರ ಕೊಟ್ಟಾಗ ಮಗುವಿನ ಆರೋಗ್ಯ ರಕ್ಷಣೆ ಪಡೆಯಲು ಸಾಧ್ಯ ಎಂದರು.
ಈ ವೇಳೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪುಷ್ಪಾ ಅವರು ಮಾತನಾಡಿ, ಗರ್ಭಿಣಿ ಎಂದ ತಿಳಿದ ತಕ್ಷಣ ಸರಿಯಾದ ಸಮಯಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಎದೆಹಾಲಿನ ಬಗ್ಗೆ ಮುಂಜಾತ್ರ ಕ್ರಮ ವಹಿಸಬೇಕು ಇಲ್ಲದಿದ್ದಲ್ಲಿ ಚೊಚ್ಚಲ್ಲ ಗರ್ಭಿಣಿಯರಲ್ಲಿ ಸೀಳಿ ಮೊಲೆತೊಟ್ಟು ಆಗುವ ಸಾದ್ಯತೆ ಇರುತ್ತದೆ. ಇದರಿಂದ ಶಿಶುವಿಗೆ ಎದೆಹಾಲು ಕುಡಿಸದೆ ಇದ್ದಲ್ಲಿ ಮಗು ಕಡಿಮೆ ತೂಕ ಆಗಬಹದು.
ತಾಯಿ ಎದೆಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲ ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಗೆ ಸಹಾಯಕವಾಗುವ ಕ್ಯಾಲ್ಷಿಯಂ, ಫಾಸ್ಫರಸ್‌ನಂಥ ಲವಾಂಶಗಳನ್ನು ಹೀರಿಕೊಳ್ಳಲು ಸಹಾಯಕವಾಗುತ್ತದೆ. ಇದರಿಂದ ಮಗುವಿನ ಬೆಳವಣಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಕಿರಿಯ ಆರೋಗ್ಯ ನಿರೀಕ್ಷಾಣಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ತಾಯಂದಿರು, ಹಾಜರಿದ್ದರು.