ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 10
ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿರುವ 2024-25ನೇ ಸಾಲಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಯ ಜನರ ಆರ್ಥಿಕ ಅಭಿವೃದ್ಧಿಗಾಗಿ ಸ್ವಯಂ ಉದ್ಯೋಗ-ನೇರಸಾಲ ಯೋಜನೆ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ-1(ಸಹಾಯಧನ ಗರಿಷ್ಠ ರೂ.1.00 ಲಕ್ಷ), ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ-2 (ಸಹಾಯಧನ ಗರಿಷ್ಠ ರೂ.2.00 ಲಕ್ಷ), ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ-3-ಸ್ವಾವಲಂಭಿ ಸಾರಥಿ ಯೋಜನೆ (ಸರಕು ವಾಹನ/ಟ್ಯಾಕ್ಸಿ(ಹಳದಿ ಬೋರ್ಡ್) ಸಹಾಯಧನ ಗರಿಷ್ಠ ರೂ.4.00 ಲಕ್ಷ), ಮೈಕ್ರೋ ಕ್ರೆಡಿಟ್(ಪ್ರೇರಣಾ) (ಮಹಿಳಾ ಸ್ವ ಸಹಾಯ ಗುಂಪುಗಳಿಗೆ), ಭೂ ಒಡೆತನ ಯೋಜನೆಯಡಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯುವ ಸಲುವಾಗಿ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಫಲಾಪೇಕ್ಷಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸೆಪ್ಟೆಂಬರ್ 10 ರಿಂದ ಅಕ್ಟೋಬರ್ 10 ರವರೆಗೆ ಸಲ್ಲಿಸಬಹುದಾಗಿದೆ.
ನಿಗಮದಿಂದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಜಿದಾರರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿರಬೇಕು ಹಾಗೂ ಕಳೆದ ಕನಿಷ್ಠ 15 ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅರ್ಜಿದಾರರು ಕನಿಷ್ಠ 21 ರಿಂದ 50 ವರ್ಷ ಮೇಲ್ಪಟ್ಟವರಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶವಾದಲ್ಲಿ ರೂ.1,50,000 ಹಾಗೂ ನಗರ ಪ್ರದೇಶವಾದಲ್ಲಿ ರೂ. 2,00,000 ಮಿತಿಯೊಳಗಿರಬೇಕು. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು. ಅರ್ಜಿದಾರರು ಹಾಗೂ ಅವರ ಕುಟುಂಬದವರು ಯಾವುದೇ ನಿಗಮಗಳಿಂದ ಈ ಹಿಂದೆ ಸಾಲ ಸೌಲಭ್ಯ ಪಡೆದಿರಬಾರದು.
ಅರ್ಜಿದಾರರು ಆನ್ಲೈನ್ನಲ್ಲಿ ಸಲ್ಲಿಸಬೇಕಾದ ದಾಖಲಾತಿಗಳ ವಿವರ. ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ. ಆರ್.ಡಿ ನಂಬರ್ ಹೊಂದಿರುವ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ. ಪಡಿತರ ಚೀಟಿ/ಆಧಾರ್ ಕಾರ್ಡ್/ಮತದಾರರ ಗುರುತಿನ ಚೀಟಿ ಅರ್ಜಿದಾರರ ಬ್ಯಾಂಕ್ ಉಳಿತಾಯ ಖಾತೆಯ ವಿವರಗಳನ್ನೊಳಗೊಂಡ ಪಾಸ್ಬುಕ್ ಪ್ರತಿ. ಇಚ್ಛಿಸುವ ಯೋಜನೆಗಳ ಯೋಜನಾ ವರದಿ. ವಾಹನದ ಪರವಾನಗಿ. ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ಸಲ್ಲಿಸುವವರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.
ಅರ್ಹ ಫಲಾಪೇಕ್ಷಿಗಳು ಆನ್ಲೈನ್ ಮೂಲಕ ಆಯಾ ನಿಗಮದ ವ್ಯಾಪ್ತಿಯಲ್ಲಿ ಬರುವ ಸಮುದಾಯಗಳ ಅರ್ಜಿಗಳನ್ನು ಸಲ್ಲಿಸಬೇಕಾದ ವೆಬ್ಸೈಟ್ ವಿಳಾಸ https://sevasindhu.karnatak.gov.in ದಲ್ಲಿ ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್, ಇವುಗಳ ಮೂಲಕ ಅಪ್ಲೋಡ್ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ಕಛೇರಿ ಅಥವಾ ಆಯಾ ತಾಲ್ಲುಕು ಅಭಿವೃದ್ದಿ ಅಧಿಕಾರಿಗಳನ್ನು (ದೇವನಹಳ್ಳಿ ದೂ.ಸಂ 8050854019, ದೊಡ್ಡಬಳ್ಳಾಪುರ ದೂ.ಸಂ8050854020, ಹೊಸಕೋಟೆ ದೂ.ಸಂ-8050854021 ಮತ್ತು ನೆಲಮಂಗಲ ದೂ.ಸಂ-8050854022) ಹಾಗೂ ನಿಗಮದ ವೆಬ್ಸೈಟ್ ನಲ್ಲಿ ಸಂಪರ್ಕಿಸಬಹುದಾಗಿದೆ. 2023-24 ನೇ ಸಾಲಿನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ಆದಿಜಾಂಬವ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.