Views: 0
ಧಾರವಾಡ ಮೇ.31:
ಮುಂಗಾರು ಹಂಗಾಮಿನ ಬಿತ್ತನೆಗಾಗಿ ರೈತರು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಆದ್ಯತೆ ಮೇರೆಗೆ ಬಿತ್ತನೆ ಬೀಜ ಖರೀದಿಸುವುದು ಉತ್ತಮ. ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿಲ್ಲದ ಸಂದರ್ಭದಲ್ಲಿ ಇಲಾಖೆಯಿಂದ ಮಾರಾಟ ಪರವಾನಗಿ ಹೊಂದಿರುವ ಅಧಿಕೃತ ಬಿತ್ತನೆ ಬೀಜ ಮಾರಾಟಗಾರರಿಂದ ಬಿತ್ತನೆ ಬೀಜವನ್ನು ಖರೀದಿಸಬೇಕು. ಬಿತ್ತನೆ ಬೀಜ ಖರೀದಿಸಿದಾಗ ತಪ್ಪದೇ ಅಧಿಕೃತ ರಶೀದಿ ಪಡೆಯಬೇಕು, ರಶೀದಿಯಲ್ಲಿ ಲಾಟ್ ನಂಬರ ಮತ್ತು ಮಾರಾಟ ಬೆಲೆ ವಿವರಗಳನ್ನು ನಮೂದಿಸಿರಬೇಕು. ಮುಂಗಾರು ಹಂಗಾಮಿನಲ್ಲಿ ಗ್ರಾಮಗಳಲ್ಲಿ ಮಾರಾಟ ಪರವಾನಗಿ ಹೊಂದಿಲ್ಲದ ಬಿಲ್ ನೀಡದೆ ಇರುವ ಯಾವುದೇ ಅನ್ಯ ವ್ಯಕ್ತಿಗಳಿಂದ ಬಿತ್ತನೆ ಬೀಜಗಳನ್ನು ಖರೀದಿಸಬಾರದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಕಿರಣಕುಮಾರ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಿತ್ತನೆ ಬೀಜದ ಚೀಲ, ಸ್ವಲ್ಪ ಪ್ರಮಾಣದ ಬಿತ್ತನೆ ಬೀಜ, ದೃಡೀಕರಣದ ಬಗ್ಗೆ ಲಗತ್ತಿಸಿರುವ ಟ್ಯಾಗುಗಳನ್ನು ಬೆಳೆ ಕಟಾವು ಆಗುವವರೆಗೆ ಸುರಕ್ಷಿತವಾಗಿ ಕಾಯ್ದಿಟ್ಟುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಬೆಳೆ ಹಾನಿ ಉಂಟಾದಾಗ ಮಾರಾಟಗಾರರು, ಉತ್ಪಾದಕರ ವಿರುದ್ದ ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲಿಸಬಹುದು. ಬಿತ್ತನೆ ಬೀಜದ ಉತ್ಪಾದಕರು ಹಾಗೂ ಮಾರಾಟಗಾರರ ವಿಳಾಸವನ್ನು ಗಮನಿಸಬೇಕು. ಬಿತ್ತನೆ ಬೀಜವು ಸಂಬಂದಪಟ್ಟ ಪ್ರಾಧಿಕಾರದಿಂದ ಪರೀಕ್ಷಿಸಲ್ಪಟ್ಟು ಗುಣಮಟ್ಟದ ಬಗ್ಗೆ ದೃಡೀಕರಿಸಲಾಗಿದೆಯೆ? ದೃಡೀಕರಣದ ಟ್ಯಾಗ್ ಗಳನ್ನು ಲಗತ್ತಿಸಲಾಗಿದೆಯೆ? ಎಂದು ರೈತರು ಖಾತರಿಪಡಿಸಿಕೊಳ್ಳುಬೇಕು ಎಂದು ಅವರು ಹೇಳಿದ್ದಾರೆ.
ಬಿತ್ತನೆಗೆ ಮುಂಚೆ ಬೀಜ ಮೊಳೆಯುವಿಕೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಬೇಕು. ಬಿತ್ತನೆ ಬೀಜವನ್ನು ಕೀಟನಾಶಕಗಳಿಂದ ಉಪಚರಿಸಲಾಗಿದೆಯೆ? ಎಂಬುದನ್ನು ರೈತರು ಗಮನಿಸಬೇಕು. ನಮೂದಿಸಿರುವ ಉತ್ಪಾದನಾ ದಿನಾಂಕ ಮತ್ತು ಬಳಕೆಗೆ ಯೋಗ್ಯದ (ವ್ಯಾಲಿಡಿಟಿ) ಅವಧಿಯನ್ನು ಗಮನಿಸಬೇಕು. ಯಾವುದೇ ಚಿಲ್ಲರೆ ಮಾರಾಟಗಾರಿಂದ ಬಿತ್ತನೆ ಬೀಜಗಳ ಖರೀದಿ ಮಾಡಬಾರದು. ಮತ್ತು ಹೆಚ್ಚಿನ ಮಾಹಿತಿಗಾಗಿ 0836-2447517 ಗೆ ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಕಿರಣಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.