ಮಾರ್ಚ್ 15ಕ್ಕೆ ಥಿಯೇಟರ್‌ಗೆ ಬರಲಿದೆ ಲಾಕ್‌ಡೌನ್ ಕಾಲದ ಕಥೆ ‘ಫೋಟೋ’
ಕೋವಿಡ್‌ನ ಆರಂಭ ಘಟ್ಟದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೇ ಕೇಂದ್ರ ಸರ್ಕಾರವು ಘೋಷಿಸಿದ ಲಾಕ್‌ಡೌನ್‌ನ ಪರಿಣಾಮ ವಲಸೆ ಕಾರ್ಮಿಕರು ಅನುಭವಿಸಿದ ಕಷ್ಟಗಳನ್ನು ಬಿಚ್ಚಿಡುವ ‘ಫೋಟೋ’ ಸಿನಿಮಾ ಮಾರ್ಚ್ 15ರಂದು ಥಿಯೇಟರ್‌ಗೆ ಬರಲಿದೆ ಎಂದು ಸಿನಿಮಾ ತಂಡ ಇಂದು (ಫೆ.21) ಮಾಹಿತಿ ನೀಡಿದೆ.
ಇಂದು ಸಂಜೆ ಫೋಟೋ ಸಿನಿಮಾವನ್ನು ನಿರ್ದೇಶನ ಮಾಡಿರುವ ‘ಮಸಾರಿ ಟಾಕೀಸ್’ ತಂಡ ಸುಮಾರು ಒಂದೂವರೆ ನಿಮಿಷದ ಟ್ರೇಲರ್ ಅನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆಗೊಳಿಸಿದ್ದು, ಮಾರ್ಚ್ 15ರಂದು ಥಿಯೇಟರ್‌ಗೆ ಬರಲಿದೆ ಎಂದು ತಿಳಿಸಿದೆ.
ಸಿನಿಮಾದ ಬೆಂಬಲಕ್ಕೆ ನಿಂತ ಕನ್ನಡದ ಖ್ಯಾತ ನಿರ್ದೇಶಕ ಪವನ್ ಕುಮಾರ್ ಹಾಗೂ ನಟ ಡಾಲಿ ಧನಂಜಯ್ ಅವರಿಗೆ ‘ಫೋಟೋ’ವನ್ನು ಪ್ರಸ್ತುತ ಪಡಿಸುತ್ತಿರುವ ಬಹುಭಾಷಾ ಕಲಾವಿದ ಪ್ರಕಾಶ್ ರಾಜ್ ಅವರು ಸೋಷಿಯಲ್ ಮೀಡಿಯಾದ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.
ಸುಮಾರ ಒಂದೂವರೆ ನಿಮಿಷದ ಟ್ರೈಲರ್, ಪ್ರಧಾನಿ ನರೇಂದ್ರ ಮೋದಿ ಘೋಷಿಸುವ ಲಾಕ್‌ಡೌನ್ ಹೇಳಿಕೆಯಿಂದ ಆರಂಭಗೊಳ್ಳುತ್ತದೆ. ಟ್ರೈಲರ್ ಅನ್ನು ಹಿನ್ನೆಲೆ ಹಾಡಿನ ಮೂಲಕ ಕೆಲವೊಂದು ಡಯಲಾಗ್‌ಗಳೊಂದಿಗೆ ಪ್ರಸ್ತುತಪಡಿಸಲಾಗಿದ್ದು, ನೋಡುಗರನ್ನು ಒಮ್ಮೆ ಲಾಕ್‌ಡೌನ್ ಕಾಲಕ್ಕೆ ಕರೆದೊಯ್ಯುತ್ತದೆ.
ಕಳೆದ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿದಲ್ಲಿ ಪ್ರೇಕ್ಷಕರಿಂದ ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದ ‘ಫೋಟೋ’ ಸಿನಿಮಾ ತೆರೆಗೆ ಬರುತ್ತಿದ್ದು, ಕೋವಿಡ್ ಸಮಯದ ಕಥೆಗೆ ಬಹುಭಾಷಾ ಕಲಾವಿದ ಪ್ರಕಾಶ್ ರಾಜ್ ಅವರು ಜೊತೆಯಾಗಿದ್ದಾರೆ.
ಫೋಟೋ ಸಿನಿಮಾವನ್ನು ನಿರ್ದಿಗಂತದ ಮೂಲಕ ಪ್ರಕಾಶ್ ರಾಜ್ ಪ್ರಸ್ತುಪ ಪಡಿಸುತ್ತಿದ್ದಾರೆ. ಈ ಮೂಲಕ ಹೈದ್ರಾಬಾದ್ ಕರ್ನಾಟಕದ ಕಥೆಗೆ ನಿರ್ದಿಗಂತ ಜೊತೆಯಾಗಿ ನಿಂತಿದೆ. ರಾಯಚೂರು ಮೂಲದ ಯುವ ಪ್ರತಿಭೆ ಉತ್ಸವ್ ಗೊನ್ವಾರ್ ಅವರ ಚೊಚ್ಚಲ ಸಿನಿಮಾ ಇದು.
ಕಳೆದ ಏಳು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿರುವ ಅವರು, ಈ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟು ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಏನಿದು ಕಥೆ?
ಫೋಟೋ ಸಿನಿಮಾ ಕೊರೋನಾ ಲಾಕ್‌ಡೌನ್ ಸಮಯದಲ್ಲಿ ನಡೆದ ಒಂದು ಕಥೆ ಆಗಿದೆ. ಇದು ಅಪ್ಪ-ಮಗನ ಬಾಂಧವ್ಯದ ಕಥೆ ಆಗಿದೆ. ಲಾಕ್ ಡೌನ್ ಟೈಮ್‌ನಲ್ಲಿ ನಡೆದ ಕಥೆಯ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಚಿತ್ರದ ಹಲವಾರು ವಿಷಯಗಳು ಬಹಳ ನೈಜವಾಗಿಯೇ ಕಟ್ಟಿಕೊಡಲಾಗಿದೆ.
‘ಫೋಟೋ’ ಮೂಲಕ ಸ್ವತಂತ್ರ ಡೈರೆಕ್ಟರ್ ಆಗಿರುವ ಉತ್ಸವ್ ಗೊನ್ವಾರ್, ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಚಿತ್ರದಲ್ಲಿ ಮಹದೇವ್ ಹಡಪದ್, ಸಂಧ್ಯಾ ಅರಕೆರೆ, ಜಹಾಂಗೀರ್, ವೀರೇಶ್ ಗೊನ್ವಾರ್ ಅಭಿನಯಿಸಿದ್ದಾರೆ.
ದಿನೇಶ್ ದಿವಾಕರನ್ ಕ್ಯಾಮರಾವರ್ಕ್ ಮಾಡಿದ್ದಾರೆ. ರವಿ ಹಿರೇಮಠ್ ಸೌಂಡ್ ಡಿಸೈನ್ ಮಾಡಿದ್ದಾರೆ. ಶಿವರಾಜ್ ಮೆಹೂ ಎಡಿಟಿಂಗ್ ಮಾಡಿದ್ದಾರೆ.
ಚಿತ್ರ: ಫೋಟೋ
ಬಿಡುಗಡೆ: ಮಾರ್ಚ್ 15, 2024
ಚಿತ್ರಕಥೆ ಮತ್ತು ನಿರ್ದೇಶನ: ಉತ್ಸವ್ ಗೊನ್ವಾರ್
ನಿರ್ಮಾಣ: ಮಸಾರಿ ಟಾಕೀಸ್
ಸಹ ನಿರ್ಮಾಪಕ: ಫಕೀರಪ್ಪ ಬಂಡಿವಾಡ
ಪ್ರಸ್ತುತಿ: ಪ್ರಕಾಶ್ ರಾಜ್, ನಿರ್ದಿಗಂತ