ಬೆಂಗಳೂರು: ಡಿ.13:
ನಗರದ ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ *ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್* ರವರು ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಣ್ಣೀರಹಳ್ಳ ರಾಜಕಾಲುವೆ ಕಾಮಗಾರಿ ಪರಿಶೀಲನೆ:
ಯಶವಂತಪುರ ರೈಲ್ವೆ ನಿಲ್ದಾದ ಬಳಿಯ ತಣ್ಣೀರಹಳ್ಳ ಹಾಗೂ ರೈಲ್ವೆ ಕ್ವಾಟ್ರಸ್ ಬಳಿ ಮಳೆಗಾಲದಲ್ಲಿ ಜಲಾವೃತವಾಗುವುದನ್ನು ತಪ್ಪಿಸುವ ಸಲುವಾಗಿ 200 ಮೀಟರ್ ಉದ್ದ ಪೈಪ್ ಲೈನ್ ಅಳವಡಿಕೆಯನ್ನು ಪರಿಶೀಲಿಸಿ ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ ನೀಡಿದರು.
ತಣ್ಣೀರಹಳ್ಳ ಪ್ರದೇಶದಲ್ಲಿ ಜಲಾವೃತವಾಗುವುದನ್ನು ತಡೆಯಲು 1.8 ಮೀಟರ್ ನ ಸೀಮೆಂಟ್ ಕೊಳವೆ(ಪೈಪ್) ಅಳವಡಿಸಲಾಗುತ್ತಿದ್ದು, ಈ ಕಾಮಗಾರಿಯನ್ನು 1.5 ಕೋಟಿ ರೂ. ವೆಚ್ಚದಲ್ಲಿ ಕೈಗತ್ತಿಕೊಳ್ಳಲಾಗಿದೆ. ಕಾಮಗಾರಿ ಪೂರ್ಣಗೊಂಡರೆ ಇಲ್ಲಿ ಯಾವುದೇ ರೀತಿಯ ಜಲಾವೃತವಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಯಶವಂತಪುರದ ಎಂಇಐ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ:
ಯಶವಂತಪುರದ ಎಂಇಐ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಮಾರ್ಚ್ 2025ರ ಅಂತ್ಯೊಳಗಾಗಿ ಪೂರ್ಣಗೊಳಿಸಲು ಸೂಚನೆ ನಡೆಸಿದರು.
950 ಮೀ. ಉದ್ದದ ಎಂಇಐ ರಸ್ತೆಯಲ್ಲಿ ಸಂಚಾರಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಕಳೆದ 2 ತಿಂಗಳಿಂದ ವೈಟ್ ಟಾಪಿಂಗ್ ಕಾಮಗಾರಿ ಪ್ರಾರಂಭಿಸಲಾಗಿದೆ. ಎರಡೂ ಬದಿಯ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಿ ಕಾಮಗಾರಿ ನಡೆಸಲಾಗುತ್ತಿದೆ.
ಈ ರಸ್ತೆಯಲ್ಲಿ ನೀರುಗಾಲುವೆ, ಸ್ಯಾನಿಟರಿ ಲೈನ್, ಡಕ್ಟ್ ಅಳವಡಿಕೆ, ವಿದ್ಯುತ್ ಲೈನ್ ಚೇಂಬರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಪಾದಚಾರಿ ಮಾರ್ಗ ಕಾಮಗಾರಿ ಪ್ರಗತಿಯಲ್ಲಿದೆ. ವೈಟ್ ಟಾಪಿಂಗ್ ಕಾಮಗಾರಿಯನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ನಾಗರಭಾವಿ ಕೆರೆಗೆ ಫೆನ್ಸಿಂಗ್ ಅಳವಡಿಸಿ:
ನಾಗರಭಾವಿ ಕೆರೆಗೆ ಸಂಬಂಧಿಸಿದಂತೆ ಸರ್ವೆ ಇಲಾಖೆಯ ವತಿಯಿಂದ ಕೂಡಲೇ ಸರ್ವೆ ವರದಿ ಪಡೆದು, ಅದರಂತೆ ಫೆನ್ಸಿಂಗ್ ಕಾರ್ಯ ಕೈಗೊಳ್ಳಲು ಕೆರೆ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಾಗರಭಾವಿ ಕೆರೆ 4 ಎಕರೆ 7 ಗುಂಟೆ ಇದ್ದು, ಕೆರೆಯ ಇನ್ಲೆಟ್ ಭಾಗದಲ್ಲಿ ಆರ್.ಸಿ.ಸಿ ವಾಲ್ ಕಾಮಗಾರಿ ನಡೆಯುತ್ತಿದ್ದು, ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ ನೀಡಿದರು.
ಕೆರೆ ಪಕ್ಕದಲ್ಲಿ ಉದ್ಯಾನಕ್ಕೆಂದು ಮೀಸಲಿಟ್ಟಿರುವ ಖಾಲಿ ಜಾಗವಿದ್ದು, ಅದನ್ನು ಸರ್ವೇ ಮಾಡಿ ಗಡಿ ಗುರುತಿಸಿ ಫೆನ್ಸಿಂಗ್ ಮಾಡಲು ಸೂಚಿಸಿದರು.
ಕುವೆಂಪು(ಅಮ್ಮ ಆಶ್ರಮ) ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ:
ಕೆಂಗೇರಿ ಹಳೆ ರಿಂಗ್ ರಸ್ತೆಯಿಂದ ಅಮ್ಮ ಆಶ್ರಮದ ವರೆಗಿನ ಕುವೆಂಪು ಮುಖ್ಯರಸ್ತೆಯಲ್ಲಿ 1.04 ಕಿ.ಮೀ ಉದ್ದ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ಪೆಬ್ರಬರಿ ಅಂತ್ಯದೊಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ಕುವೆಂಪು ಮುಖ್ಯ ರಸ್ತೆ ಸಬ್ ಆರ್ಟಿರಿಯಲ್ ರಸ್ತೆಯಾಗಿದ್ದು, ಈಗಾಗಲೇ ಪೈಪ್ ಲೈನ್, ಡಕ್ಟ್, ಯುಜಿಡಿ, ಚೇಂಬರ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಇದೀಗ ವೈಟ್ ಟಾಪಿಂಗ್ ಕಾಮಗಾರಿಯನ್ನು ಶೀಘ್ರ ಕೈಗೆತ್ತೊಕೊಂಡು ಕಾಲಮಿತಿಯೊಳಾಗಿ ಪೂರ್ಣಗೊಳಿಸುವುದಾಗಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಈ ವೇಳೆ ವಲಯ ಆಯುಕ್ತರಾದ ಸತೀಶ್, ವಲಯ ಜಂಟಿ ಆಯುಕ್ತರಾದ ಡಾ. ಆರತಿ ಆನಂದ್, ವಲಯ ಮುಖ್ಯ ಅಭಿಯಂತರರಾದ ಸ್ವಯಂಪ್ರಭ, ಯೋಜನಾ ವಿಭಾಗದ ಮುಖ್ಯ ಅಭಿಯಂತರರಾದ ಲೋಕೇಶ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.