ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಕೇಂದ್ರದ ವೈಫಲ್ಯ ಕಾರಣವಲ್ಲವೇ ?
ಕೇಂದ್ರ ಸರ್ಕಾರವು ರಾಷ್ಟ್ರದ ಭದ್ರತೆಗೆಂದೇ ರಾಜ್ಯಗಳಿಂದ ತೆರಿಗೆ ಸಂಗ್ರಹಿಸುತ್ತದೆ. ರಾಷ್ಟ್ರದ ಭದ್ರತೆ ಎಂದರೆ ಏನು ? ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಆದರೆ ಅದು ರಾಷ್ಟ್ರೀಯ ಭದ್ರತೆ ವಿಫಲದ ವ್ಯಾಪ್ತಿಯಲ್ಲಿ ಬರುವುದಿಲ್ಲವೇ ?
ಬಾಂಬ್ ಬ್ಲಾಸ್ಟ್ ಅನ್ನುವುದು ಕರ್ನಾಟಕಕ್ಕೆ ಇದೇನು ಮೊದಲಲ್ಲ. ಈ ಹಿಂದೆಯೂ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬಾಂಬ್ ಬ್ಲಾಸ್ಟ್ ಪ್ರಕರಣಗಳು ದಾಖಲಾಗಿದೆ. ಆದರೆ ಈ ಬಾರಿ ಮಾತ್ರ ಎನ್ಐಎಗಿಂತಲೂ ಬಿಜೆಪಿ ಹೆಚ್ಚು ಕ್ರೀಯಾಶೀಲವಾಗಿ ವಿಚಾರಣೆ ನಡೆಸತೊಡಗಿದೆ. ಬಾಂಬ್ ಬ್ಲಾಸ್ಟ್ ಆದ ಕೆಲವೇ ಗಂಟೆಗಳಲ್ಲಿ ಬಿಜೆಪಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದು ದುರಂತ ! ಈ ಹಿಂದೆಯೂ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದರೂ, ಸ್ಪೋಟದ ಹೊಗೆ ಆರುವ ಮೊದಲೇ ಬಿಜೆಪಿ ತನ್ನ ರಾಜಕೀಯ ಹಪಾಹಪಿಯನ್ನು ಬಹಿರಂಗವಾಗಿ ತೋರಿಸಿದ್ದು ಇದೇ ಮೊದಲು !
ಬಾಂಬ್ ಬ್ಲಾಸ್ಟ್ ಪ್ರಕರಣ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಉದಾಹರಣೆಯಾಗುವುದು ಹೇಗೆ ? ಭಯೋತ್ಪಾದನೆ ಎಂಬುದು ರಾಷ್ಟ್ರೀಯ ವಿಷಯ. ನಕ್ಸಲ್ ಮತ್ತು ಪ್ರತ್ಯೇಕ ರಾಜ್ಯಕ್ಕಾಗಿ ನಡೆಯುವ ಬಂಡಾಯ ಮಾದರಿಯ ಭಯೋತ್ಪಾದನೆ (?)ಗೆ ಮಾತ್ರ ರಾಜ್ಯ ಸರ್ಕಾರ ಜವಾಬ್ದಾರಿ. ಕರ್ನಾಟಕದಲ್ಲಿ ಸಧ್ಯ ಅಂತಹ ಮಾದರಿಯ ಬಂಡಾಯವೇ ಇಲ್ಲ. ಹಾಗಿರುವಾಗ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಬ್ಲಾಸ್ಟ್ ಭಯೋತ್ಪಾದನೆಯೇ ಆಗಿದ್ದರೆ ಅದು ಖಂಡಿತವಾಗಿಯೂ ಕೇಂದ್ರ ಸರ್ಕಾರದ ವೈಫಲ್ಯವಾಗುತ್ತದೆ. ಎನ್ಐಎಯ ಸಂಪೂರ್ಣ ಹಿಡಿತ ಹೊಂದಿರುವುದು ಕೇಂದ್ರ ಸರ್ಕಾರ. ಎನ್ಐಎ, ರಾ ಸೇರಿದಂತೆ ಹಲವು ಗೂಢಾಚಾರ ಸಂಸ್ಥೆಗಳು ಇಂತಹ ಭಯೋತ್ಪಾದನಾ ನಿಗ್ರಹಕ್ಕೆಂದೇ ಕೆಲಸ ಮಾಡುತ್ತಿದೆ. ಅದರ ಜವಾಬ್ದಾರಿಯ ನಿರ್ವಹಣೆಯಲ್ಲಿ ಆಗಿರುವ ವೈಫಲ್ಯವಲ್ಲವೇ ? ಅಂತರರಾಜ್ಯ, ಅಂತರರಾಷ್ಟ್ರೀಯ ಭಯೋತ್ಪಾಧನೆಯನ್ನು ಗುಪ್ತಚರ ಮಾಹಿತಿ ಮೂಲಕ ಕಂಡು ಹಿಡಿದು ನಿಯಂತ್ರಿಸುವಂತಹ ಸಾಮರ್ಥ್ಯ ಯಾವುದಾದರೂ ರಾಜ್ಯದ ಪೊಲೀಸ್ ಇಲಾಖೆಗೆ ಇರುತ್ತದೆಯೇ ? ಅಂತಹ ಸಾಮರ್ಥ್ಯ ಮತ್ತು ವ್ಯವಸ್ಥೆ ಇರುವುದು ಎನ್ಐಎ ಮತ್ತು ರಾ ದಂತಹ ಕೇಂದ್ರದ ಸಂಸ್ಥೆಗಳಿಗೆ ಮಾತ್ರ !
ಕೇಂದ್ರ ಸರ್ಕಾರವು ರಾಷ್ಟ್ರದ ಭದ್ರತೆಗೆಂದೇ ರಾಜ್ಯಗಳಿಂದ ತೆರಿಗೆ ಸಂಗ್ರಹಿಸುತ್ತದೆ. ರಾಷ್ಟ್ರದ ಭದ್ರತೆ ಎಂದರೆ ಏನು ? ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಆದರೆ ಅದು ರಾಷ್ಟ್ರೀಯ ಭದ್ರತೆ ವಿಫಲದ ವ್ಯಾಪ್ತಿಯಲ್ಲಿ ಬರುವುದಿಲ್ಲವೇ ?
ಹಾಗಾಗಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಬ್ಲಾಸ್ಟ್ ಬಾಂಬ್ ಬ್ಲಾಸ್ಟ್ ಹೌದಾದರೆ, ಅದು ಭಯೋತ್ಪಾದನೆಯ ಕೃತ್ಯವೇ ಹೌದಾದರೆ ಕೇಂದ್ರ ಸರ್ಕಾರ ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಸ್ಪಷ್ಟವಾಗಿ ವಿಫಲವಾಗಿದೆ. ವಾಸ್ತವವಾಗಿ ಇಂತಹ ಘಟನೆಗಳು ನಡೆದಾಗ ರಾಜಕೀಯ ಪಕ್ಷಗಳು ಮೌನವಾಗಿದ್ದುಕೊಂಡು ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಆದರೆ ಸ್ಫೋಟದ ಹೊಗೆ ಆರುವ ಮೊದಲೇ ಅದರ ಹಿಂದೆ ರಾಜಕೀಯ ಚರ್ಚೆ ಶುರುವಾದ್ದರಿಂದ ಜವಾಬ್ದಾರಿಯ ಬಗ್ಗೆ ವಿಮರ್ಶೆ ನಡೆಯಬೇಕಿದೆ.