ಸನ್ಮಾನ್ಯ ಮುಖ್ಯಮಂತ್ರಿಗಳಿಂದ ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕ(Transfer Station) ಹಾಗೂ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕಗಳ ಉದ್ಘಾಟನೆ:

0
24
Share this Article
0
(0)
Views: 0

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ವತಿಯಿಂದ ಪಶ್ಚಿಮ ವಲಯ ಬಿನ್ನಿಮಿಲ್ ರಸ್ತೆಯ ಛಲವಾದಿ ಪಾಳ್ಯ ವಾರ್ಡ್ ವ್ಯಾಪ್ತಿಯಲ್ಲಿ ನಿರ್ಮಿಸಿರುವ ದ್ವಿತೀಯ ಹಂತದ ಘನತ್ಯಾಜ್ಯ ಘಟಕ ಹಾಗೂ ಸ್ವಯಂ ಚಾಲಿತ ತ್ಯಾಜ್ಯ ವಿಂಗಡಣೆ ಘಟಕವನ್ನು ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು ಉದ್ಘಾಟಿಸಿದರು.

ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕ ಹಾಗೂ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕಗಳನ್ನು 12.50 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಚಾಮರಾಜಪೇಟೆ ವಿಭಾಗದ 6 ವಾರ್ಡ್ ಹಾಗೂ ಗಾಂಧಿನಗರ ವಿಭಾಗದ 3 ವಾರ್ಡ್ ಸೇರಿದಂತೆ 9 ವಾರ್ಡ್ ಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಈ ಘಟಕದಲ್ಲಿ ಸ್ವೀಕರಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ.

1. ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕ:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ, ಒಣ ಮತ್ತು ಗೃಹ ಹಾನಿಕಾರಕ ನೈರ್ಮಲ್ಯ ತ್ಯಾಜ್ಯವನ್ನಾಗಿ ಬೇರ್ಪಡಿಸಿ ಸಂಗ್ರಹಿಸಲಾಗುತ್ತಿದ್ದು, ಸದರಿ ಕಾರ್ಯವು ಅನೇಕ ಹಂತಗಳನ್ನು ಒಳಗೊಂಡಿದೆ. ಇದರಲ್ಲಿ ಬಂಡವಾಳ ವೆಚ್ಚ ಮತ್ತು ಹೆಚ್ಚಿನ ಮಾನವ ಸಂಪನ್ಮೂಲದಿಂದ ಕೂಡಿರುತ್ತದೆ.

ಪ್ರಸ್ತುತ ತ್ಯಾಜ್ಯವನ್ನು ಪ್ರಾಥಮಿಕ ಸಂಗ್ರಹಣಾ ವಾಹನ(ಆಟೋಟಿಪ್ಪರ್)ಗಳಿಂದ ದ್ವಿತೀಯ ಹಂತದ ಸಾಗಾಣಿಕ ವಾಹನಗಳಿಗೆ(ಕಾಂಪ್ಯಾಕ್ಟರ್) ವರ್ಗಾವಣೆಯನ್ನು ರಸ್ತೆ ಬದಿ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಿರ್ವಹಿಸಲಾಗುತ್ತಿದೆ.

ಸುಧೀರ್ಘವಾಗಿ ಒಂದೇ ಸ್ಥಳದಲ್ಲಿ ತ್ಯಾಜ್ಯ ವರ್ಗಾವಣೆಯನ್ನು ಮಾಡುತ್ತಿರುವುದರಿಂದ ತ್ಯಾಜ್ಯ ಮತ್ತು ಲೀಚೆಟ್ ಸೋರಿಕೆಯಿಂದಾಗಿ ಸದರಿ ಸ್ಥಳಗಳು ಬ್ಲಾಕ್ ಸ್ಪಾಟ್‌ಗಳಾಗಿ ಮಾರ್ಪಾಡಾಗುತ್ತಿದ್ದು, ನಗರದ ಸೌಂದರ್ಯ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆಯುಂಟು ಮಾಡುತ್ತಿರುತ್ತದೆ.

ಪಾಲಿಕೆಯ ರಸ್ತೆಗಳಲ್ಲಿ ಬ್ಲಾಕ್ ಸ್ಪಾಟ್ ಗಳನ್ನು ತೆರವುಗೊಳಿಸಿ, ರಸ್ತೆಯಲ್ಲಿ ಸೋರುವ ಲೀಚೆಟ್ ದ್ರವವನ್ನು ತಡೆದು “ತ್ಯಾಜ್ಯ-ಮುಕ್ತ” ಪ್ರದೇಶಗಳನ್ನಾಗಿ ಮಾರ್ಪಡಿಸಲು ಹಾಗೂ ನಗರದ ಸೌಂದರ್ಯವನ್ನು ಹೆಚ್ಚಿಸಿ, ಬೆಂಗಳೂರು ನಗರವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿಸಲು ಪಾಲಿಕೆಯು ತ್ಯಾಜ್ಯ ನಿರ್ವಹಣೆಗಾಗಿ *ಯಾಂತ್ರೀಕೃತ ದೊಡ್ಡ ತ್ಯಾಜ್ಯ ವರ್ಗಾವಣಾ ಕೇಂದ್ರಗಳನ್ನು* ನಿರ್ಮಿಸಲು ಯೋಜನೆ ರೂಪಿಸಿರುತ್ತದೆ.

ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ ಪ್ರತಿನಿತ್ಯ 150 ರಿಂದ 200 ಮೆ.ಟನ್ ಸಾಮರ್ಥ್ಯದ 3 ಟ್ರಾನ್ಸ್ ಫರ್ ಸ್ಟೇಷನ್‌ಗಳನ್ನು ಸ್ಥಾಪಿಸಲು ರೂ. 40.00 ಕೋಟಿಗಳ ಮೊತ್ತವನ್ನು ನಿಗಧಿಸಲಾಗಿದ್ದು, ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಗುಣಮಟ್ಟವನ್ನು ಕಾಪಾಡಲು ಸಮರ್ಥ ಕಾರ್ಯವಿಧಾನವನ್ನು ಸ್ಥಾಪಿಸುವ ಮೂಲಕ ಹಾಲಿ ಇರುವ ವ್ಯವಸ್ಥೆಯನ್ನು ಉನ್ನತೀಕರಿಸಲು ಯೋಜಿಸಲಾಗಿರುತ್ತದೆ.

ಅದರಂತೆ 3 ಟ್ರಾನ್ಸ್ ಫರ್ ಸ್ಟೇಷನ್‌ಗಳನ್ನು ನಿರ್ಮಿಸಿ ನಿರ್ವಹಿಸಲು ಟೆಂಡರ್ ಮುಖೇನ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿರುತ್ತದೆ. ಸದರಿ 3 ಟ್ರಾನ್ಸ್ಫರ್ ಸ್ಟೇಷನ್‌ಗಳ ವಿವರಗಳು ಈ ಕೆಳಕಂಡಂತಿವೆ.

1. ಬಿಟಿಎಂ ವಿಭಾಗದ ವಾರ್ಡ್ ಸಂ. 148(ಈಜೀಪುರ) – ಕಾಮಗಾರಿ ಪೂರ್ಣಗೊಂಡಿದ್ದು ದಿನಾಂಕ: 13.03.2024 ರಂದು ಉದ್ಘಾಟಿಸಲಾಗಿರುತ್ತದೆ.

2. ಚಾಮರಾಜಪೇಟೆ ವಿಭಾಗದ ವಾರ್ಡ್ ಸಂ. 138 (ಛಲವಾದಿಪಾಳ್ಯ) – ಕಾಮಗಾರಿ ಪೂರ್ಣಗೊಂಡಿದ್ದು, ಇಂದು ಉದ್ಘಾಟಿಸಲಾಗಿದೆ.

3. ಸರ್ವಜ್ಞನಗರ ವಿಭಾಗದ ವಾರ್ಡ್ ಸಂ. 24 ಹೆಚ್‌ಬಿಆರ್ ಬಡಾವಣೆ ಪ್ರದೇಶದಲ್ಲಿ ನಿರ್ಮಿಸಲು ಕ್ರಮವಹಿಸಲಾಗಿರುತ್ತದೆ. – ಕಾಮಗಾರಿಯು ಪ್ರಗತಿಯಲ್ಲಿದ್ದು, ಜನವರಿ -2025ಕ್ಕೆ ಪೂರ್ಣಗೊಳ್ಳಲಿದೆ.

ದ್ವಿತೀಯ ಹಂತದ ದೊಡ್ಡ ಪ್ರಮಾಣದ ಟ್ರಾನ್ಸ್ ಫರ್ ಸ್ಟೇಷನ್‌ಗಳ ಪ್ರಮುಖ ಅಂಶಗಳು:

ಒಂದೇ ಸ್ಥಳದಲ್ಲಿ ಪ್ರತಿನಿತ್ಯ ಸುಮಾರು 150 ರಿಂದ 200 ಮೆ. ಟನ್ ತ್ಯಾಜ್ಯವನ್ನು ಪ್ರಾಥಮಿಕ ಸಂಗ್ರಹಣೆಯ ವಾಹನಗಳಿಂದ ದ್ವಿತೀಯ ಹಂತದ ಸಾಗಾಣಿಕೆ ವಾಹನಗಳಿಗೆ ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರಿಂದ ರಸ್ತೆ ಬದಿಗಳಲ್ಲಿ ಆಗುತ್ತಿದ್ದ ವಾಹನಗಳ ದಟ್ಟಣೆ, ಬ್ಲಾಕ್ ಸ್ಪಾಟ್‌ಗಳ ನಿರ್ಮಾಣ ಹಾಗೂ ಲೀಚೆಟ್ ದ್ರವದ ಸೋರುವಿಕೆಯನ್ನು ತಡೆಗಟ್ಟಿ ನಗರ ಸೌಂದರ್ಯವನ್ನು ಹೆಚ್ಚಿಸಬಹುದಾಗಿರುತ್ತದೆ.

ತ್ಯಾಜ್ಯ ವಿಲೇವಾರಿಗೆ ಒಂದು ಪ್ರದೇಶವು ಮೀಸಲಾಗಿರುವುದರಿಂದ ಪ್ರಾಥಮಿಕ ಸಂಗ್ರಹಣೆಯ ಸಾಮರ್ಥ್ಯವು ಹೆಚ್ಚಾಗಿ ಇದರಿಂದ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಣೆಯ ಕಾರ್ಯವು ಸುಧಾರಿಸಬಹುದಾಗಿರುತ್ತದೆ.

ಪ್ರಾಥಮಿಕ ಸಂಗ್ರಹಣಾ ವಾಹನಗಳು ಟ್ರಾನ್ಸ್ ಫರ್ ಸ್ಟೇಷನ್‌ಗಳಲ್ಲಿ ಆರ್‌ಎಫ್‌ಐಡಿ ಮುಖೇನ ನೊಂದಣಿಯಾಗುತ್ತಿದ್ದು, ವಾಹನಗಳಲ್ಲಿ ತ್ಯಾಜ್ಯದ ಪರಿಮಾಣವು ಸಹ ದಾಖಲಾಗಿ ಎಲ್ಲಾ ಮಾಹಿತಿಗಳನ್ನು ಪ್ರತಿನಿತ್ಯ ಕೇಂದ್ರ ಕಛೇರಿಯ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್‌ಗೆ ತಲುಪಿಸುವ ಯೋಜನೆ ರೂಪಿಸಲಾಗಿದ್ದು, ಇದರಿಂದ ಸೂಕ್ಷ್ಮ ಮಟ್ಟದಲ್ಲಿ / ಬ್ಲಾಕ್ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆಯ ಹೊಣೆಗಾರಿಕೆ ಮತ್ತು ಜವಾಬ್ದಾರಿಗಳು ಹೆಚ್ಚಾಗುತ್ತದೆ.

ಟ್ರಾನ್ಸ್ ಫರ್ ಸ್ಟೇಷನ್‌ಗಳು ಒಂದೇ ಸ್ಥಳದಲ್ಲಿ ದೀರ್ಘ ಸಮಯದವರೆಗೆ ಕಾರ್ಯನಿರ್ವಹಣೆಯಾಗುವುದರಿಂದ ಹೆಚ್ಚಿನ ಸಮಯ ಹಾಗೂ ಪ್ರಮಾಣದಲ್ಲಿ ಪ್ರಾಥಮಿಕ ಸಂಗ್ರಹಣೆಯ ಕಾರ್ಯ ನಿರ್ವಹಿಸಬಹುದಾಗಿರುತ್ತದೆ.

ಟ್ರಾನ್ಸ್ ಫರ್ ಸ್ಟೇಷನ್‌ಗಳು 2 ರಿಂದ 3 ಪಾಳಿಯಲ್ಲಿ ಕಾರ್ಯನಿರ್ವಹಿಸಲು ಯೋಜಿಸಿರುವುದರಿಂದ, ವಾರ್ಡ್ಗಳಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ಉತ್ತಮ ಫಲಿತಾಂಶ ಕಾಣಬಹುದಾಗಿರುತ್ತದೆ.

ಟ್ರಾನ್ಸ್ ಫರ್ ಸ್ಟೇಷನ್‌ಗಳಲ್ಲಿ ದ್ವಿತೀಯ ಹಂತದ ಸಾಗಾಣಿಕ ವಾಹನಗಳಾದ ಕಂಟೈನರ್‌ಗಳು ಲಿಚೆಟ್ ಸೋರಿಕೆಯನ್ನು ತಡೆಗಟ್ಟುವ ತಂತ್ರಜ್ಞಾನವನ್ನು ಹೊಂದಿದ್ದು, ತ್ಯಾಜ್ಯ ವರ್ಗಾವಣೆಯನ್ನು ಬಹುಮುಖ್ಯವಾಗಿ ಉಂಟಾಗುವ ಲಿಚೆಟ್ ದ್ರವದ ಸೋರಿಕೆಯನ್ನು ತಡೆಗಟ್ಟಬಹುದಾಗಿರುತ್ತದೆ.

ಪ್ರಸ್ತುತ ಪಾಲಿಕೆಯಲ್ಲಿ 14 ಘನ ಮೀಟರ್ ಸಾಮರ್ಥ್ಯದ ಕಾಂಪ್ಯಾಕ್ಟರ್‌ಗಳು ತ್ಯಾಜ್ಯವನ್ನು ಒಂದು ಬಾರಿ ಮಾತ್ರವೇ ಸಂಸ್ಕರಣಾ ಘಟಕಗಳು / ಭೂಭರ್ತಿ ಪ್ರದೇಶಗಳಿಗೆ ವಿಲೇವಾರಿ ಮಾಡುತ್ತಿರುವುದರಿಂದ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹಾಗೂ ವಾಯು ಮಾಲಿನ್ಯ ಉಂಟಾಗುತ್ತಿದ್ದು, ದ್ವಿತೀಯ ಹಂತದ ಟ್ರಾನ್ಸ್ ಫರ್ ಸ್ಟೇಷನ್‌ಗಳಲ್ಲಿ ಕಾರ್ಯನಿರ್ವಹಿಸುವ 20 ಘನ ಮೀಟರ್ ಸಾಮರ್ಥ್ಯದ ಕಂಟೈನರ್‌ಗಳು ಸದರಿ ವಾಹನ ದಟ್ಟಣೆ ಹಾಗೂ ವಾಯು ಮಾಲಿನ್ಯ ತಡೆಗಟ್ಟಲು ಸಹಕಾರಿಯಾಗಲಿದೆ.

ಘನತ್ಯಾಜ್ಯ ನಿರ್ವಹಣಾ ನಿಯಮ-2016 ಘನ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನಿರ್ದೇಶನಗಳಂತೆ ತ್ಯಾಜ್ಯವನ್ನು ಯಾಂತ್ರೀಕೃತವಾಗಿ ಹಾಗೂ ವೈಜ್ಞಾನಿಕವಾಗಿ ನಿರ್ವಹಿಸಬಹುದಾಗಿರುತ್ತದೆ.

 

2. ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕ:

ಘನತ್ಯಾಜ್ಯ ನಿರ್ವಹಣಾ ನಿಯಮ-2016ರ ಪ್ರಕಾರ ತ್ಯಾಜ್ಯ ಉತ್ಪಾದಕರು ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸಿ ಪಾಲಿಕೆ ನಿಗಧಿಸಿದ ವಾಹನಗಳಿಗೆ ನೀಡುವುದು ಕಡ್ಡಾಯವಾಗಿರುತ್ತದೆ. ಪಾಲಿಕೆಯು ತ್ಯಾಜ್ಯ ವಿಂಗಡಣೆಗೆ ವಿವಿಧ ಹಂತಗಳಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರಿಗೆ ಮಾಹಿತಿ ಹಾಗೂ ಅರಿವಿನ ಕಾರ್ಯಕ್ರಮಗಳನ್ನು ಮೂಡಿಸಲಾಗುತ್ತಿದ್ದರೂ ಸಹ ಈವರೆಗೆ ತ್ಯಾಜ್ಯ ವಿಂಗಡಣೆಯಲ್ಲಿ ಶೇಕಡ 55% ರಷ್ಟು ಪ್ರಗತಿಯನ್ನು ಮಾತ್ರವೇ ಸಾಧಿಸಲು ಸಾಧ್ಯವಾಗಿರುತ್ತದೆ. ತ್ಯಾಜ್ಯ ವಿಂಗಡಣೆಯು ವಿವಿಧ ವಾರ್ಡ್ಗಳಲ್ಲಿ ಕನಿಷ್ಟ ಶೇಕಡ 50% ರಿಂದ ಗರಿಷ್ಟ 85% ರವರೆಗೆ ಪ್ರಗತಿ ಸಾಧಿಸಲಾಗಿರುತ್ತದೆ.

ವಿಂಗಡಣೆಯಾಗದ ತ್ಯಾಜ್ಯವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಭೂಭರ್ತಿ ಪ್ರದೇಶಗಳಲ್ಲಿ ವಿಲೇವಾರಿ ಮಾಡುತ್ತಿದ್ದು, ಇದರಿಂದ ಭೂಭರ್ತಿ ಪ್ರದೇಶದ ಮೇಲೆ ಹೊರೆಯಾಗುತ್ತಿರುವುದಲ್ಲದೇ ಪರಿಸರದ ಮೇಲೆ ತೀರ್ವ ಪ್ರಮಾಣದ ತೊಂದರೆಯುಂಟು ಮಾಡುತ್ತಿರುತ್ತದೆ. ಘನತ್ಯಾಜ್ಯ ನಿರ್ವಹಣಾ ನಿಯಮವು ಮಾನವ ಸಂಪನ್ಮೂಲ ಮುಖೇನ ತ್ಯಾಜ್ಯ ವಿಂಗಡಣೆ ಮಾಡುವುದನ್ನು ನಿಷೇಧಿಸಿರುತ್ತದೆ.

ಪಾಲಿಕೆ/ಬಿಎಸ್‌ಡಬ್ಲ್ಯೂಎಂಎಲ್ ಸಂಸ್ಥೆಯು ಸ್ವಯಂ ಚಾಲಿತ ಯಾಂತ್ರೀಕೃತ ತ್ಯಾಜ್ಯ ವಿಂಗಡಣೆ ಯಂತ್ರಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿರುತ್ತದೆ.

ಪ್ರತಿ ಗಂಟೆಗೆ 5 ಮೆ. ಟನ್ ತ್ಯಾಜ್ಯ ವಿಂಗಡಣೆಯಾಗುವ ಅಂದರೆ ಪ್ರತಿನಿತ್ಯ ಸುಮಾರು 40 ಟನ್ ತ್ಯಾಜ್ಯವು ವಿಂಗಣೆಯಾಗುವ ಸಾಮರ್ಥ್ಯದ 2 ಘಟಕಗಳನ್ನು ನಿರ್ಮಿಸಿ ನಿರ್ವಹಿಸಲಾಗುತ್ತಿದೆ.

ದಿನಾಂಕ: 13.03.2024ರಂದು ಮೊದಲನೇ ಸ್ವಯಂ ಚಾಲಿತ ತ್ಯಾಜ್ಯ ವಿಂಗಡಣಾ ಕೇಂದ್ರವು ಬಿಟಿಎಂ ವಿಭಾಗದ ವಾರ್ಡ್ ಸಂ. 148 (ಈಜೀಪುರ) ಉದ್ಘಾಟನೆಯಾಗಿದ್ದು, ಪ್ರಸ್ತುತ ಕಾರ್ಯಚರಣೆಯಲ್ಲಿರುತ್ತದೆ.

 

ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕದ ಪ್ರಮುಖ ಅಂಶಗಳು:

ರಸ್ತೆ ಬದಿಯಲ್ಲಿ ಬ್ಲಾಕ್ ಸ್ಪಾಟ್‌ಗಳು ಕಡಿಮೆಯಾಗಿ ಸಾರ್ವಜನಿಕ ಪ್ರದೇಶಗಳು/ ರಸ್ತೆಗಳು ಸ್ವಚ್ಛ ಹಾಗೂ ಸುಂದರವಾಗಿ ಕಾಣುತ್ತದೆ.

ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಕೇಂದ್ರಗಳಲ್ಲಿ ತ್ಯಾಜ್ಯದ ಅಂಕಿ ಅಂಶಗಳು ದಾಖಲಾಗುವುದರಿಂದ ವಾರ್ಡ್ಗಳಲ್ಲಿನ ಸೂಕ್ಷ್ಮ ಮಟ್ಟದಲ್ಲಿ/ ಬ್ಲಾಕ್‌ಗಳಲ್ಲಿ ತ್ಯಾಜ್ಯ ವಿಂಗಡಣೆಯ ಪರಿಮಾಣವನ್ನು ತಿಳಿದುಕೊಂಡು, ಸದರಿ ಪ್ರದೇಶಗಳಲ್ಲಿ ತ್ಯಾಜ್ಯ ವಿಂಗಡಣೆಗೆ ಅಗತ್ಯವಿರುವ ವಾಹನಗಳು ಹಾಗೂ ಪರಿಕರಗಳನ್ನು ಪೂರೈಸಿ ತ್ಯಾಜ್ಯ ವಿಂಗಡಣೆಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಬಹುದಾಗಿರುತ್ತದೆ.

ಇದರಿಂದ ತ್ಯಾಜ್ಯ ವಿಂಗಡಣೆಗೆ ಒಂದು ಸ್ಥಳವನ್ನು ನಿಗಧಿಸಬಹುದಾಗಿದ್ದು, ಸಾರ್ವಜನಿಕ ಸ್ಥಳಗಳಿಂದ ಶೇಖರಣೆಯಾಗುವ ಮಿಶ್ರ ತ್ಯಾಜ್ಯವನ್ನು ವಿಂಗಡಿಸಬಹುದಾಗಿರುತ್ತದೆ.

ಸ್ವಯಂಚಾಲಿತ ತ್ಯಾಜ್ಯ ವಿಂಗಡಣಾ ಕೇಂದ್ರಗಳಲ್ಲಿ ತ್ಯಾಜ್ಯವನ್ನು ಪ್ರತ್ಯೇಕಿಸುವುದರಿಂದ ಒಣತ್ಯಾಜ್ಯವು ಒಂದೇ ಪ್ರದೇಶದಲ್ಲಿ ಶೇಖರಣೆಯಾಗುತ್ತಿದ್ದು, ಇದರಿಂದ ಚಿಂದಿ ಆಯುವವರು/ ಅಸಂಘಟಿತ ತ್ಯಾಜ್ಯ ಸಂಗ್ರಾಹಕರಿಗೆ ಸಹಾಯವಾಗುತ್ತದೆ.

ಮಾನವ ಸಂಪನ್ಮೂಲಗಳು ನೇರವಾಗಿ ತ್ಯಾಜ್ಯದ ಸಂಪರ್ಕಕ್ಕೆ ಬರದೇ ಯಾಂತ್ರೀಕೃತವಾಗಿ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಮಾಡುವುದರಿಂದ, ತ್ಯಾಜ್ಯದಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಡೆಗಟ್ಟಿ ರೋಗರುಜಿನಗಳನ್ನು ಕಡಿಮೆಗೊಳಿಸಬಹುದಾಗಿರುತ್ತದೆ.

ತ್ಯಾಜ್ಯ ವಿಂಗಡಣೆಯಲ್ಲಿ ಪ್ರಗತಿ ಸಾಧಿಸಬಹುದಾಗಿದ್ದು, ಇದರಿಂದಾಗಿ ಭೂಭರ್ತಿ ಪ್ರದೇಶಗಳ ಮೇಲೆ ಒತ್ತಡವನ್ನು ಕಡಿಮೆಗೊಳಿಸಬಹುದಾಗಿರುತ್ತದೆ.

ತ್ಯಾಜ್ಯವನ್ನು ಮರುಬಳಕೆ/ ಮರು ಉಪಯೋಗ ಮಾಡಿಕೊಂಡು, ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಮಾರ್ಪಡಿಸಬಹುದಾಗಿರುತ್ತದೆ.

ಈ ವೇಳೆ ಮಾನ್ಯ ವಸತಿ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಶ್ರೀ ಬಿ.ಜೆಡ್ ಜಮೀರ್ ಅಹ್ಮದ್ ಖಾನ್, ಮಾನ್ಯ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್, ಆಡಳಿತಗಾರರಾದ ಶ್ರೀ ಎಸ್.ಆರ್ ಉಮಾಶಂಕರ್, ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್, ಬಿ‌.ಎಸ್.ಡಬ್ಲ್ಯೂ.ಎಂ.ಎಲ್ ನ ಸಿಇಒ ಡಾ. ಕೆ. ಹರೀಶ್ ಕುಮಾರ್, ವಲಯ ಆಯುಕ್ತರಾದ ಅರ್ಚನಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here