ಗಾಂಧಿನಗರದಲ್ಲಿ ವಾಹನ ನಿಲುಗಡೆ ನಿಷೇಧ: ಡಿಸಿಎಂ ಡಿ.ಕೆ. ಶಿವಕುಮಾರ್

0
38
Share this Article
0
(0)
Views: 0

ಬೆಂಗಳೂರು, ಜೂನ್ 21

“ಸುಗಮ ಸಂಚಾರ ಹಾಗೂ ಸಂಚಾರಿ ದಟ್ಟಣೆ ನಿಯಂತ್ರಣಕ್ಕೆ ಗಾಂಧಿನಗರದ 1 ಕಿ.ಮೀ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿಯಲ್ಲಿ ಫ್ರೀಡಂ ಪಾರ್ಕ್ ಸಮೀಪ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಶುಕ್ರವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;

“ಬೆಂಗಳೂರು ಡಿಸಿ ಹಾಗೂ ಪೊಲೀಸ್ ಆಯುಕ್ತರು ಸೇರಿ ಗಾಂಧಿನಗರದ ಪ್ರಮುಖ ರಸ್ತೆಗಳಲ್ಲಿ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ನಿರ್ಬಂಧ ಮಾಡಿದ್ದಾರೆ. ಇಲ್ಲಿನ ರಸ್ತೆ ವಿಶಾಲವಾಗಿರಬೇಕು. ಎಲ್ಲಾ ವ್ಯಾಪಾರಿಗಳಿಗೆ ಲಾಭವಾಗಬೇಕು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. 

ಈ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣದ ಮೂಲಕ ಬೆಂಗಳೂರು ನಗರ ಇಂದು ಹೊಸ ಇತಿಹಾಸ ಪುಟಕ್ಕೆ ಸೇರಿದೆ. ಅಲ್ಲದೆ ಇಡೀ ರಾಜ್ಯಕ್ಕೆ ಸಂದೇಶ ರವಾನೆಯಾಗಿದೆ. ಇಲ್ಲಿ ಪ್ರತಿ ಗಂಟೆಗೆ ವಾಹನ ನಿಲುಗಡೆಗೆ 20-30 ರೂ. ನಿಗದಿ ಮಾಡಿದ್ದು, ಎರಡು ಮೂರು ಕಾರು ಹೊಂದಿರುವವರು ಕೂಡ ಇಲ್ಲಿ ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ. 

ನಗರದ ಯಾವುದೇ ಭಾಗದಿಂದ ಜನ ತಮ್ಮ ವಾಹನದಲ್ಲಿ ಬಂದರೂ ಇಲ್ಲಿ ಅವರು ವಾಹನ ನಿಲುಗಡೆ ಮಾಡಿ, ಅವರು ವಿಧಾನಸೌಧ, ಹೈಕೋರ್ಟ್, ರೈಲ್ವೇ ನಿಲ್ದಾಣ ಸೇರಿದಂತೆ ಗಾಂಧಿ ನಗರದ ಸುತ್ತಮುತ್ತಲಿನ ಪ್ರದೇಶಕ್ಕೆ ಹೋಗಲು ಗುತ್ತಿಗೆದಾರರು ಉಚಿತ ಸಂಚಾರಿ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಗಾಂಧಿ ನಗರದಲ್ಲಿ ದಿನೇಶ್ ಗುಂಡೂರಾವ್ ಅವರ ಮುಖಂಡತ್ವದಲ್ಲಿ ವಿಶೇಷ ಯೋಜನೆ ಜಾರಿ ಮಾಡಲಾಗಿದೆ. 

ಗಾಂಧಿನಗರ ಎಂದರೆ ಮಧ್ಯಮ ವರ್ಗದ ಜನ ಹೆಚ್ಚಾಗಿ ಬರುತ್ತಿದ್ದಾರೆ. ವಾಹನ ನಿಲುಗಡೆ ಸಮಸ್ಯೆ ಎದುರಾಗುತ್ತಿತ್ತು. ಈಗ ಅದಕ್ಕೆ ಪರಿಹಾರ ನೀಡಲಾಗುತ್ತಿದೆ. ಈ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ಮಾಡುವ ಹೊಸ ಪ್ರಯೋಗಕ್ಕೆ ಗುತ್ತಿಗೆದಾರರು ಕೈ ಹಾಕಿದ್ದಾರೆ. ಅವರು ಸರ್ಕಾರಕ್ಕೂ 1.50 ಕೋಟಿ ಹಣ ಪಾವತಿಸಿ, ಹೇಗೆ ಆದಾಯ ಮಾಡುತ್ತಾರೋ ಗೊತ್ತಿಲ್ಲ. ಇದು ಸುಲಭವಾದ ಕೆಲಸವಲ್ಲ. ಈ ವ್ಯವಸ್ಥೆ ಗಾಂಧಿನಗರಕ್ಕೆ ಬಹಳ ಅವಶ್ಯಕವಾಗಿದೆ.

ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಮಾಡಲು ಬರುವವರಿಗೂ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ಎಲ್ಲೋ ಗಾಡಿ ನಿಲ್ಲಿಸಿ ಬರುವುದಕ್ಕಿಂತ ಇಂತಹ ವ್ಯವಸ್ಥೆ ಬಳಸಿಕೊಳ್ಳುವುದು ಹೆಚ್ಚಿನ ಅನುಕೂಲವಾಗುತ್ತದೆ. ಖಾಸಗಿಯವರು, ವರ್ತಕರು, ಗ್ರಾಹಕರು ಸೇರಿದಂತೆ ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು. ಇದು ಮಾದರಿ ಯೋಜನೆಯಾಗಿದ್ದು, ಬೆಂಗಳೂರಿನ ಇತರ ಕಡೆಗಳಲ್ಲಿ ಎಲ್ಲೆಲ್ಲಿ ಈ ಯೋಜನೆ ಜಾರಿ ಮಾಡಬಹುದು ಎಂದು ಚರ್ಚೆ ಮಾಡಿ ಜಾರಿ ಮಾಡುತ್ತೇವೆ.

ಇಂತಹ ಗುತ್ತಿಗೆದಾರರು ಶಕ್ತಿಶಾಲಿಯಾದರೆ ಮಾತ್ರ ಸರ್ಕಾರ ಶಕ್ತಿಶಾಲಿಯಾಗುತ್ತದೆ. ಅವರು ದುರ್ಬಲರಾದರೆ ಸರ್ಕಾರವೂ ದುರ್ಬಲವಾಗುತ್ತದೆ. ಈ ವಿಚಾರವಾಗಿ ಏಳು ಬಾರಿ ಟೆಂಡರ್ ಕರೆದು ವಿಫಲವಾಗಿದ್ದೆವು. ಇವರು ದೊಡ್ಡ ಧೈರ್ಯ ಮಾಡಿ ಮುಂದೆ ಬಂದಿದ್ದಾರೆ. ಅವರ ಧೈರ್ಯವನ್ನು ನಾನು ಮೆಚ್ಚುತ್ತೇನೆ. ನಮ್ಮ ಮಾಲ್ ಗಳಲ್ಲೂ ಇಂತಹ ವ್ಯವಸ್ಥೆ ಇದೆ. ಅಲ್ಲಿನ ಗ್ರಾಹಕ ವರ್ಗವೇ ಬೇರೆ. ಇಲ್ಲಿ ಅಂತಹ ಗ್ರಾಹಕ ವರ್ಗ ಹೆಚ್ಚಾಗಿ ಬರುವುದಿಲ್ಲ. 

ನನಗೂ ಗಾಂಧಿನಗರಕ್ಕೂ ಸುಮಾರು 25 ವರ್ಷಗಳ ಸಂಬಂಧ. ಇಲ್ಲೇ ಕಾಲೇಜಿನಲ್ಲಿ ಓದಿದೆ, ಜನರಲ್ ಹಾಸ್ಟೆಲ್ ನಲ್ಲಿ ಇದ್ದೆ. ಇಲ್ಲಿ ನನ್ನ ಕಚೇರಿ ಹೊಂದಿ ವ್ಯವಹಾರಗಳನ್ನು ಮಾಡಿದ್ದೇನೆ. ಹೀಗಾಗಿ ಗಾಂಧಿನಗರದ ವ್ಯವಹಾರಗಳ ಬಗ್ಗೆ ನನಗೆ ಅರಿವಿದೆ. ಗಾಂಧಿನಗರದ ಸುತ್ತಮುತ್ತ ಪಾರ್ಕಿಂಗ್ ಬ್ಯಾನ್ ಮಾಡಿದ್ದೇವೆ. 

ಎರಡು ಮೂರು ದಿನಗಳಲ್ಲಿ ಜಾಹೀರಾತು ನೀತಿ:

ಬೆಂಗಳೂರಿಗೆ ಹೊಸ ರೂಪ ನೀಡಲು ನಾವು ಮುಂದಾಗಿದ್ದೇವೆ. ಈ ಕಾರ್ಯಕ್ರಮದ ನಂತರ ಜಾಹಿರಾತು ನೀತಿ ಬಗ್ಗೆ ಪಾಲಿಕೆ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ. ಮುಂದಿನ ಎರಡು ಮೂರು ದಿನಗಳಲ್ಲಿ ಜಾಹೀರಾತು ನೀತಿಯನ್ನು ತರುತ್ತೇವೆ. ನಂತರ ಟಿಡಿಆರ್ ಸಮಸ್ಯೆ ಬಗೆಹರಿಸಲಾಗುವುದು. ನಂತರ ಪ್ರೀಮಿಯಂ ಎಫ್ಎಆರ್ ಸೇರಿದಂತೆ ಎಲ್ಲಾ ವಿಚಾರವಾಗಿ ಪರಿಹಾರ ಕಂಡುಕೊಳ್ಳಲಾಗುವುದು. 

ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಡಬಲ್ ಡೆಕ್ಕರ್ ಕಾರಿಡಾರ್ ಮೂಲಕ ಮೇಲ್ಸೇತುವೆ ಹಾಗೂ ಅದರ ಮೇಲೆ ಮೆಟ್ರೋ ಮಾರ್ಗವನ್ನು ನಿರ್ಮಾಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಯಾವುದೇ ಮೆಟ್ರೋ ಮಾರ್ಗ ಮಾಡಿದರೂ ಮೇಲ್ಸೇತುವೆ ಜತೆಯಲ್ಲೇ ಮೆಟ್ರೋ ಮಾರ್ಗವನ್ನು ನಿರ್ಮಾಣ ಮಾಡಲಾಗುವುದು. ಇದರಿಂದ ಖಾಸಗಿ ಭೂಮಿ ವಶಕ್ಕೆ ಪಡೆಯುವ ಪ್ರಕ್ರಿಯೆಯಿಂದ ಮುಕ್ತರಾಗುತ್ತೇವೆ. ಬಿಬಿಎಂಪಿ ಹಾಗೂ ಬಿಎಂಆರ್ ಸಿಎಲ್ ಸಹಯೋಗದಲ್ಲಿ ಈ ಕಾಮಗಾರಿಗಳನ್ನು ಮಾಡಲಾಗುವುದು. 

ಈ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಶ್ರೀ ದಿನೇಶ್ ಗುಂಡೂರಾವ್, ಆಡಳಿತಗಾರರಾದ ಶ್ರೀ ಎಸ್.ಆರ್ ಉಮಾಶಂಕರ್, ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್, ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಪಶ್ಚಿಮ ವಲಯ ಆಯುಕ್ತರಾದ ಡಾ. ಆರ್.ಎಲ್ ದೀಪಕ್, ಪ್ರಧಾನ ಅಭಿಯಂತರರಾದ ಡಾ. ಬಿ.ಎಸ್ ಪ್ರಹ್ಲಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು‌.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here